ಸೌತಾಂಪ್ಟನ್: ಪಾಕಿಸ್ತಾನಕ್ಕೆ ತೆರಳಿ ಕ್ರಿಕೆಟ್ ಸರಣಿ ಆಡುವುದನ್ನು ನಾನು ಇಷ್ಟ ಪಡುತ್ತೇನೆಂದು ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಜೋ ರೂಟ್ ಹೇಳಿದ್ದಾರೆ.
ಪಾಕಿಸ್ತಾನಕ್ಕೆ ತೆರಳಬೇಕು ಎಂಬ ಅಂತಿಮ ನಿರ್ಧಾರ ನನ್ನ ಕೈಯಲ್ಲಿಲ್ಲ. ಆದರೆ ಪಾಕ್ಗೆ ಪ್ರವಾಸ ಕೈಗೊಳ್ಳುವುದನ್ನು ಇಷ್ಟ ಪಡುತ್ತೇನೆ ಎಂದು ರೂಟ್ ತಿಳಿಸಿದ್ದಾರೆ.
ನಾನು ಪಾಕಿಸ್ತಾನಕ್ಕೆ ಭೇಟಿ ನೀಡುವುದನ್ನು ಇಷ್ಟ ಪಡುತ್ತೇನೆ. ವೈಯಕ್ತಿಕವಾಗಿ ಅಲ್ಲಿಗೆ ತೆರಳಿ ಕ್ರಿಕೆಟ್ ಆಡುವುದು ಒಂದು ಅದ್ಭುತ ಅವಕಾಶ ಎಂದು ನಾನು ಭಾವಿಸುತ್ತೇನೆ. ದುರದೃಷ್ಟವಶಾತ್ ಅದೆಲ್ಲ ನನ್ನ ನಿರ್ಧಾರದ ಮೇಲಿಲ್ಲ. ಅಲ್ಲಿಗೆ ತೆರಳುವುದು ಮತ್ತು ಅಲ್ಲಿ ಕ್ರಿಕೆಟ್ ಆಡಿದರೆ ಅದ್ಭುತವಾಗಿರುತ್ತದೆ. ಅಲ್ಲಿನ ಪಿಚ್ಗಳು ಫ್ಲಾಟ್ ಆಗಿರುತ್ತವೆ. ನಾವು ಇಲ್ಲಿ ಆಡುತ್ತಿರುವುದಕ್ಕಿಂತ ಅಲ್ಲಿ ತುಂಬಾ ಬದಲಾವಣೆಯಿರುತ್ತದೆ ಎಂದಿದ್ದಾರೆ.
ಕಳೆದ ವರ್ಷ ಪಾಕಿಸ್ತಾನದಲ್ಲಿ ಟೆಸ್ಟ್ ಕ್ರಿಕೆಟ್ ಮರಳಿದಾಗ ಅಲ್ಲಿನ ಜನರ ಭಾವನೆಗಳನ್ನು ನೀವು ನೋಡಿರಬಹುದು. ಇದರ ಬಗ್ಗೆ ಕೆಲವು ಆಟಗಾರರ ಜೊತೆ ಮಾತನಾಡಿದಾಗ ಅವರೂ ಕೂಡ ಪಾಕಿಸ್ತಾನದಲ್ಲಿ ಕ್ರಿಕೆಟ್ ಮರಳಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೋವಿಡ್-19ನಿಂದ ಈಗಾಗಲೇ ಕೆಲವು ಸರಣಿಗಳನ್ನು ಕಳೆದುಕೊಂಡಿರುವುದರಿಂದ ಕಾರ್ಯನಿರತವಾದ ವೇಳಾಪಟ್ಟಿಯನ್ನ ಹೊಂದಿದ್ದೇವೆ. ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ನೋಡಲು ಆಸಕ್ತಿದಾಯಕವಾಗಿದೆ ಎಂದಿದ್ದಾರೆ.
ಪಾಕಿಸ್ತಾನಕ್ಕೆ ಇಂಗ್ಲೆಂಡ್ ಕೊನೆಯ ಬಾರಿ 2005-06ರಲ್ಲಿ ಪ್ರವಾಸ ಕೈಗೊಂಡಿತ್ತು. ಅಲ್ಲಿಂದ ಇಲ್ಲಿಯವರೆಗೆ ಭದ್ರತಾ ಕಾರಣದಿಂದ ಆಂಗ್ಲರ ತಂಡ ಅಲ್ಲಿಗೆ ತೆರಳಿಲ್ಲ. 2009ರಲ್ಲಿ ಶ್ರೀಲಂಕಾ ತಂಡದ ಮೇಲೆ ಭಯೋತ್ಪದಕರ ದಾಳಿಯ ನಂತರ ಪಾಕಿಸ್ತಾನದಲ್ಲಿ ಕ್ರಿಕೆಟ್ ಸ್ಥಗಿತಗೊಂಡಿತ್ತು.
ನಂತರ ಪಾಕಿಸ್ತಾನ ತನ್ನ ತವರು ಪಂದ್ಯಗಳನ್ನು ಯುಎಇನಲ್ಲಿ ನಡೆಸುತ್ತಿತ್ತು. ಆದರೆ ಕಳೆದ ಕೆಲವು ವರ್ಷಗಳಿಂದ ಪಾಕಿಸ್ತಾನಕ್ಕೆ ವೆಸ್ಟ್ ಇಂಡೀಸ್, ಶ್ರೀಲಂಕಾ ಮತ್ತು ಬಾಂಗ್ಲಾದೇಶ ತಂಡಗಳು ಭೇಟಿ ನೀಡಿ ಕೆಲವು ಸರಣಿಗಳನ್ನಾಡಿವೆ.
ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದರಿಂದ ಇಂಗ್ಲೆಂಡ್ ಕೂಡ ಪಾಕಿಸ್ತಾನಕ್ಕೆ ಪ್ರವಾಸ ಕೈಗೊಳ್ಳಬೇಕು ಎಂದು ವಾಸಿಮ್ ಅಕ್ರಮ್ ಹೇಳಿದ್ದಾರೆ. ಇದರ ಬೆನ್ನಲ್ಲೇ ರೂಟ್ ಕೂಡ ಪಾಕ್ಗೆ ಭೇಟಿ ನೀಡುವ ಆಸಕ್ತಿ ತೋರಿಸಿರುವುದರಿಂದ ಪಾಕ್ ಕ್ರಿಕೆಟ್ನಲ್ಲಿ ಬದಲಾವಣೆ ಗಾಳಿ ಬೀಸಬಹುದು ಎನ್ನಲಾಗುತ್ತಿದೆ.