ಮುಂಬೈ: ಆಸ್ಟ್ರೇಲಿಯಾ ಪ್ರವಾಸಕ್ಕೆ ಗಾಯದ ಕಾರಣ ಇಶಾಂತ್ ಶರ್ಮಾ ಅವರನ್ನು ಟೀಮ್ ಇಂಡಿಯಾದಿಂದ ಕೈಬಿಡಲಾಗಿದೆ. ಇಶಾಂತ್ ಮಹತ್ವದ ಸರಣಿಯ ಭಾಗವಾಗದೇ ಇರುವುದು ಗಿಲೆಸ್ಪಿ ಆಸ್ಟ್ರೇಲಿಯಾ ತಂಡಕ್ಕೆ ಖಂಡಿತ ದೊಡ್ಡ ಅನುಕೂಲವಾಗಲಿದೆ ಎಂದು ಮಾಜಿ ಆಸೀಸ್ ವೇಗಿ ಜಾಸನ್ ಗಿಲೆಸ್ಪಿ ಅಭಿಪ್ರಾಯಪಟ್ಟಿದ್ದಾರೆ.
ನವೆಂಬರ್ 12 ರಂದು ಆಸೀಸ್ ಪ್ರವಾಸ ಕೈಗೊಳ್ಳುವ ಭಾರತ ತಂಡ 3 ಏಕದಿನ, 3 ಟಿ-20 ಹಾಗೂ 4 ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಟೆಸ್ಟ್ ಪಂದ್ಯಗಳು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಭಾಗವಾದರೆ, ಏಕದಿನ ಸರಣಿ ಎರಡು ತಂಡಗಳಿಗೂ ವಿಶ್ವಕಪ್ ಸೂಪರ್ ಲೀಗ್ನ ಮೊದಲ ಸರಣಿಯಾಗಲಿದೆ.
ಆಸೀಸ್ ಪ್ರವಾಸಕ್ಕಾಗಿ ಬಿಸಿಸಿಐ ಸೋಮವಾರ ತಂಡ ಪ್ರಕಟಿಸಿದ್ದು ಭಾರತದ ಮಂಚೂಣಿ ಬೌಲರ್ ಇಶಾಂತ್ ಶರ್ಮಾ ರನ್ನು ಕೈಬಿಟ್ಟಿದ್ದು, ಅವರನ್ನು ವೈದ್ಯರ ವೀಕ್ಷಣೆಯಲ್ಲಿರಿಸಲಾಗಿದೆ ಎಂದು ತಿಳಿಸಿದೆ.
ಆದರೆ, ಇಶಾಂತ್ ಅಲಭ್ಯತೆಯಿಂದ ಆಸ್ಟ್ರೇಲಿಯಾ ತಂಡ ಸುಲಭವಾಗಿ ಟೆಸ್ಟ್ ಸರಣಿ ಗೆಲ್ಲಲಿದೆ ಎಂದು ಆಸೀಸ್ ಮಾಜಿ ವೇಗಿ ಜಾಸನ್ ಗಿಲೆಸ್ಪಿ ಭವಿಷ್ಯ ನುಡಿದಿದ್ದಾರೆ.
ಆಸ್ಟ್ರೇಲಿಯಾ ತಂಡ ಈ ಬಾರಿ ಭಾರತದ ವಿರುದ್ಧ ಟೆಸ್ಟ್ ಸರಣಿಯನ್ನು ಗೆಲ್ಲಲಿದೆ ಎಂಬುದು ನನ್ನ ಭವಿಷ್ಯವಾಗಿದೆ. ಏಕೆಂದರೆ ಆಸೀಸ್ ತಂಡಕ್ಕೆ ತವರಿನ ಬೆಂಬಲವಿದೆ. ಇದರ ಜೊತೆಗೆ ಭಾರತದ ಸ್ಟಾರ್ ಬೌಲರ್ಗಳಾದ ಇಶಾಂತ್ ಶರ್ಮಾ ಮತ್ತು ಭುವನೇಶ್ವರ್ ಕುಮಾರ್ ಈ ಸರಣಿಯಲ್ಲಿ ಗಾಯದ ಕಾರಣ ಆಡುತ್ತಿಲ್ಲ. ಬುಮ್ರಾ ಮತ್ತು ಶಮಿ ಉತ್ತಮವಾಗಿ ಬೌಲಿಂಗ್ ಮಾಡಬಲ್ಲರು, ಆದರೆ ಆಸ್ಟ್ರೇಲಿಯಾದ ವಾತಾವರಣದಲ್ಲಿ ಖಂಡಿತ ಭಾರತ ತಂಡ ಇಶಾಂತ್ ಅನುಭವವನ್ನು ಕಳೆದುಕೊಳ್ಳಲಿದೆ ಎಂದಿದ್ದಾರೆ.
ಇಶಾಂತ್ ಕಳೆದ ಕೆಲವು ವರ್ಷಗಳಿಂದ ಅದ್ಭುತವಾಗಿ ಬೌಲಿಂಗ್ ಮಾಡುತ್ತಿದ್ದಾರೆ. ಅವರ ಪ್ರದರ್ಶನವನ್ನು ಈ ಹಿಂದಿನ ಸರಣಿಗಳ ಫಲಿತಾಂಶ ನೋಡಿದರೆ ತಿಳಿಯುತ್ತದೆ. ಅವರು ಬೌಲಿಂಗ್ ದಾಳಿಯಲ್ಲಿ ಸೂಕ್ಷ್ಮ ವ್ಯತ್ಯಾಸಗಳನ್ನು ತರುತ್ತಾರೆ. ಬಲಗೈ ಬ್ಯಾಟ್ಸ್ಮನ್ಗಳಿಗೆ ವೈಡ್ ಆಫ್ ದ ಕ್ರೀಸ್ ಹಾಗೂ ಎಡಗೈ ಬ್ಯಾಟ್ಸ್ಮನ್ಗಳಿಗೆ ಇನ್ಸ್ವಿಂಗ್ ಬೌಲಿಂಗ್ ಮಾಡುತ್ತಾರೆ. ಈ ಸರಣಿಯಲ್ಲಿ ಅವರ ಅನುಪಸ್ಥಿತಿ ಭಾರತಕ್ಕೆ ಖಂಡಿತ ದೊಡ್ಡ ನಷ್ಟ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.