ಬ್ರಿಸ್ಬೇನ್: ಸರಣಿ ವಿಜೇತರನ್ನು ನಿರ್ಣಯಿಸುವ ಗಬ್ಬಾ ಟೆಸ್ಟ್ ಆಸ್ಟ್ರೇಲಿಯಾ ತಂಡಕ್ಕೆ ಈಗಲೂ ಹೆಚ್ಚು ಅನುಕೂಲಕಾರಿಯಾಗಲಿದೆ ಎಂದು ಭಾವಿಸುವುದಿಲ್ಲ ಎಂದು ಆಸೀಸ್ ಸ್ಪಿನ್ನರ್ ನಾಥನ್ ಲಿಯೋನ್ ಅಭಿಪ್ರಾಯಪಟ್ಟಿದ್ದಾರೆ.
ಸರಣಿಯಲ್ಲಿ ಆಸ್ಟ್ರೇಲಿಯಾದ ಸ್ಟಾರ್ ಬೌಲರ್ ಆಗಿರುವ ಲಿಯಾನ್ ಮೂರನೇ ಪಂದ್ಯ ಡ್ರಾ ಆಗುವಲ್ಲಿ ಭಾರತೀಯರು ತೋರಿಸಿದ ನಂಬಲಾಸಾಧ್ಯವಾದ ಪ್ರದರ್ಶನ ಮತ್ತು ದೃಢನಿಶ್ಚಯವನ್ನು ಎಂದಿಗೂ ಕಡೆಗಣಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
"ಗಬ್ಬಾ ಆಸ್ಟ್ರೇಲಿಯಾಗೆ ಹೆಚ್ಚು ಪ್ರಯೋಜನಕಾರಿ ಎಂದು ಹೇಳಲಾರೆ. ನೀವು ಭಾರತ ತಂಡದ ಕಡೆ ನೋಡಿ, ಅವರು ಒಂದೆರಡು ದೊಡ್ಡ ಆಟಗಾರರನ್ನು ಮಿಸ್ ಮಾಡಿಕೊಂಡಿರಬಹುದು. ಆದರೆ ಅವರು ಪ್ರತಿಭಾವಂತ ತಂಡವನ್ನು ಕಟ್ಟುವಂತಹ ಉತ್ತಮ ಆಟಗಾರರನ್ನು ಹೊಂದಿದ್ದಾರೆ" ಎಂದು ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಮೂರನೇ ಪಂದ್ಯದಲ್ಲಿ ಗಾಯಗೊಂಡಿರುವ ಬುಮ್ರಾ ಮತ್ತು ಜಡೇಜಾ ನಾಲ್ಕನೇ ಟೆಸ್ಟ್ನಲ್ಲಿ ಆಡದ ಕಾರಣ ಭಾರತ ತಂಡ ತಮ್ಮ ದ್ವಿತೀಯ ದರ್ಜೆಯ ಬೌಲರ್ಗಳನ್ನು ಕಣಕ್ಕಿಳಿಸಬೇಕಾದ ಅನಿವಾರ್ಯತೆಯಲ್ಲಿದೆ. ಆದರೆ ಈ ಬಗ್ಗೆ ಮಾತನಾಡಿದ ಅವರು, ಎದುರಾಳಿ ತಂಡ ಏನು ಮಾಡುತ್ತಿದೆ ಎನ್ನುವುದಕ್ಕಿಂತ ನಮ್ಮ ತಯಾರಿ ಬಗ್ಗೆಯೇ ನಮಗೆ ಚಿಂತೆಯಿದೆ ಎಂದಿದ್ದಾರೆ.
"ನಿಜ ಹೇಳಬೇಕೆಂದರೆ ನಾವು ನಮ್ಮ ತಯಾರಿ ಬಗ್ಗೆ ಚಿಂತೆಯಲ್ಲಿದ್ದೇವೆ. ಅವರು ಏನು ಮಾಡುತ್ತಿದ್ದಾರೆ ಎನ್ನುವುದನ್ನು ನಾವು ನೋಡುವುದಕ್ಕಾಗುವುದಿಲ್ಲ. ನಾನೊಬ್ಬ ಬೌಲರ್ ಆಗಿ ಹೇಳುವುದೆಂದರೆ ಗಬ್ಬಾ ಮೈದಾನ ನಮಗೆ ಹೆಚ್ಚು ಸರಿ ಹೊಂದಲಿದೆ. ಎದುರಾಳಿಯನ್ನು ಸುಲಭವಾಗಿ ನಿಭಾಯಿಸಬಲ್ಲೆವು ಹಾಗೂ ಚೆಂಡನ್ನು ಪಡೆದ ನಂತರ ಬೇಗ ಅವರ ವಿರುದ್ಧ ಹಿಡಿತ ಸಾಧಿಸಬಲ್ಲೆವು ಎಂಬ ವಿಶ್ವಾಸವಿದೆ ಎಂದಿದ್ದಾರೆ.
ನಾವು ಬ್ರಿಸ್ಬೇನ್ನಲ್ಲಿ ಅಮೋಘವಾದ ದಾಖಲೆಗಳನ್ನು ಹೊಂದಿದ್ದೇವೆ. ಹಾಗಾಗಿ ಅಲ್ಲಿ ಹೇಗೆ ವಿಶ್ವಾಸಯುತ ಕ್ರಿಕೆಟ್ ಆಡಬೇಕೆಂದು ನಮಗೆ ಚೆನ್ನಾಗಿ ತಿಳಿದಿದೆ. ಆದರೆ ನಾವು ಅದಕ್ಕೆ ಅಂಟಿಕೊಂಡು ಕೂರಲು ಸಾಧ್ಯವಿಲ್ಲ. ನಮಗೆ ಭಾರತೀಯರು ಎಷ್ಟು ಪ್ರತಿಭಾವಂತರು ಹಾಗೂ ಟೆಸ್ಟ್ ಸರಣಿಯನ್ನು ಗೆಲ್ಲಲು ಹೇಗೆ ಹಸಿವಿನಿಂದ ಕಾಯುತ್ತಿದ್ದಾರೆ ಎಂದು ತಿಳಿದಿದೆ ಎಂದು ಲಿಯೋನ್ ಹೇಳಿದ್ದಾರೆ.
ಇದನ್ನು ಓದಿ: ಕ್ರೀಸ್ ಅಳಿಸಿದ ಘಟನೆ; ಪ್ರತಿಕ್ರಿಯೆ ಕಂಡು ಆಘಾತವಾಗಿದೆ ಎಂದ ಸ್ಮಿತ್