ಪಾಟ್‌ಚೆಫ್‌ಸ್ಟ್ರೂಮ್: ಅಂಡರ್ 19 ವಿಶ್ವಕಪ್ನಲ್ಲಿ ಬಾಂಗ್ಲಾದೇಶ ತಂಡದ ವಿರುದ್ಧ 3 ವಿಕೆಟ್ಗಳ ಸೋಲು ಕಂಡಿದ್ದಕ್ಕೆ ಬೇಸರ ವ್ಯಕ್ತಪಡಿಸಿರುವ ಭಾರತ ತಂಡದ ನಾಯಕ ಪ್ರಿಯಂ ಗರ್ಗ್'ಈ ದಿನ ನಮ್ಮದಾಗಿರಲಿಲ್ಲ' ಎಂದಿದ್ದಾರೆ.
ಆರಂಭದಲ್ಲೇ ವಿಕೆಟ್ ಕಳೆದುಕೊಂಡರೂ ಜೈಸ್ವಾಲ್(88) ಹಾಗೂ ತಿಲಕ್ ವರ್ಮಾ(38)ರ ಜೊತೆಯಾಟದಿಂದ ಉತ್ತಮ ಲಯಕ್ಕೆ ಮರಳಿದ್ದ ಭಾರತ ತಂಡ ದಿಢೀರ್ ಕುಸಿತ ಕಂಡು ಕೇವಲ 177 ರನ್ಗಳಿಗೆ ಆಲೌಟ್ ಆಗಿತ್ತು. ಇದಕ್ಕುತ್ತರವಾಗಿ ಉತ್ತಮ ಆರಂಭ ಕಂಡಿದ್ದ ಬಾಂಗ್ಲಾದೇಶ ರವಿ ಬಿಷ್ನೋಯಿ ಅವರ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿ ಸೋಲಿನತ್ತ ತಿರುಗಿತ್ತು. ಆದರೆ, ನಾಯಕ ಅಕ್ಬರ್ ಅಲಿ(43) ಯ ಸಾಹಸದಿಂದ ಚೊಚ್ಚಲ ವಿಶ್ವಕಪ್ ಗೆದ್ದು ಇತಿಹಾಸ ಬರೆಯಿತು.
ಇತ್ತ ಭಾರತ 2016ರ ವಿಶ್ವಕಪ್ ಫೈನಲ್ನಲ್ಲಿ ವಿಂಡೀಸ್ ವಿರುದ್ಧ ಸೋಲು ಕಂಡಿದ್ದ ಭಾರತ 12 ಪಂದ್ಯಗಳ ಬಳಿಕ ಮತ್ತೆ ಸೋಲನುಭವಿಸಿತು.
" ಈ ದಿನ ನಮ್ಮದಾಗಿರಲಿಲ್ಲ, ಹುಡುಗರೆಲ್ಲ ಅದ್ಭುತವಾಗಿ ಆಡಿದರು. ಆದರೆ, ಫಲಿತಾಂಶ ನಮ್ಮ ದಾರಿಯಲ್ಲಿ ಹೋಗಲಿಲ್ಲ. ಪಂದ್ಯದಲ್ಲಿ ಪ್ರಬಲ ಪೈಪೋಟಿ ನೀಡಿದ್ದಕ್ಕೆ ಖುಷಿಯಿದೆ, ಬೌಲರ್ಸ್ಗಳು ಉತ್ತಮ ಪ್ರದರ್ಶನ ನೀಡಿದರು, ಟಾಸ್ ನಮಗೆ ಮಹತ್ವದ ವಿಚಾರವಲ್ಲ, ಬಾಂಗ್ಲಾದೇಶ ಬೌಲರ್ಗಳು ನಮ್ಮ ಬ್ಯಾಟ್ಸ್ಮನ್ಗಳ ಮೇಲೆ ಆರಂಭದಲ್ಲೆ ಒತ್ತಡ ಹೇರಿದರು. ನಮ್ಮ ಬ್ಯಾಟ್ಸ್ಮನ್ಗಳು ಉತ್ತಮವಾಗಿ ಆಡಿದರಾದರೂ 215 ರಿಂದ 220 ರನ್ಗಳಿಸಿದ್ದರೆ ನಮಗೆ ಗೆಲ್ಲಲು ಅವಕಾಶವಿತ್ತು" ಎಂದು ಗರ್ಗ್ ಪಂದ್ಯದ ಬಳಿಕ ತಿಳಿಸಿದ್ದಾರೆ.
178 ಒಳ್ಳೆಯ ಮೊತ್ತವಲ್ಲ. ಆದರೆ, ನಮ್ಮ ಬೌಲರ್ಗಳ ನೆರವಿನಿಂದ ಪಂದ್ಯ ರೋಚಕ ಅಂತ್ಯಕ್ಕೆ ಬಂದಿತ್ತು ಎಂದು ಗರ್ಗ್ ಟೀಮ್ ಇಂಡಿಯಾ ಬೌಲರ್ಗಳ ಬಗ್ಗೆ ಗುಣಗಾನ ಮಾಡಿದ್ದಾರೆ.