ಹೈದರಾಬಾದ್ : 'ಈ ಸಲ ಕಪ್ ನಮ್ದೇ'.. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಅಭಿಮಾನಿಗಳ ಬಾಯಲ್ಲಿ ಈ ಪದ ಹೊರಳದಿರುವ ವರ್ಷವಿಲ್ಲ. ವಿಶ್ವದ ಶ್ರೀಮಂತ ಪ್ರಾಂಚೈಸಿ ಲೀಗ್ ಎನಿಸಿಕೊಂಡಿರುವ ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್) 13 ಆವೃತ್ತಿಗಳಲ್ಲೂ ಪ್ರತಿಯೊಬ್ಬ ಆರ್ಸಿಬಿ ಅಭಿಮಾನಿಯಿಂದಲೂ ಕೇಳಿ ಬರುತ್ತಿರುವ ಈ ಆಶಾಭಾವನೆಗೆ ನಿರಾಶೆಯೇ ಉತ್ತರವಾಗಿದೆ. ಆದರೂ ಪ್ರಶಸ್ತಿ ಗೆಲ್ಲದಿದ್ದರೂ ಅಭಿಮಾನಿಗಳ ಪ್ರೀತಿ ಕೊಂಚವೂ ಕಡಿಮೆಯಾಗಿಲ್ಲ.
ಆದರೆ, 2021ನೇ ಸಾಲಿನಲ್ಲಿ ನಡೆಯಲಿರುವ 14ನೇ ಆವೃತ್ತಿಯ ಐಪಿಎಲ್ನಲ್ಲಿ ಆರ್ಸಿಬಿ ಪಾಲಿಗೆ ವಿಜಯಲಕ್ಷ್ಮಿ ಒಲಿಯುವುದು ಖಚಿತ ಎಂದು ಅಭಿಮಾನಿಗಳು ಆಶಾಭಾವ ಇರಿಸಿಕೊಂಡಿದ್ದಾರೆ. ಅದಕ್ಕೆ ಬಲವಾದ ಕಾರಣವನ್ನೂ ನೀಡಿದ್ದಾರೆ.
ಮೊದಲು ಈ ಬಾರಿ ಟ್ರೋಫಿ ಗೆಲ್ಲಲಿದೆಯಾ ಎಂದು ಕೇಳಿದ್ರೆ, ಸಮಯ ಬದಲಾಗಿದೆ, ಅದೃಷ್ಟ ನಮ್ಮ ಪಾಲಿಗೆ ಬಂದಿದೆ. ವಿರಾಟ್ ಕೊಹ್ಲಿಗೆ ಹೆಣ್ಣು ಮಗು ಜನನವಾದ ಬಳಿಕ ಈ ಸಲ ಕಪ್ ನಮ್ದೇ ಎನ್ನುವುದರ ಬದಲಿಗೆ ಈಗಾಗಲೇ ಕಪ್ ಗೆದ್ದಿದ್ದೇವೆ ಎಂದು ನಿರ್ಧರಿಸಿ ಸಾಮಾಜಿಕ ಜಾಲತಾಣಗಳ ಸಹಸ್ರಾರು ಅಭಿಮಾನಿಗಳು ಪೋಸ್ಟ್ ಮಾಡುತ್ತಿದ್ದಾರೆ.
ಆರ್ಸಿಬಿ ಮತ್ತು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಪತ್ನಿ ಅನುಷ್ಕಾ ಶರ್ಮಾ ಅವರಿಗೆ ಜನವರಿ 11ರಂದು ಹೆಣ್ಣು ಮಗು ಜನನವಾಗಿದೆ. ಈ ಸುದ್ದಿ ವಿರುಷ್ಕಾ ಅಭಿಮಾನಿಗಳಿಗೆ ಪುಳಕ ತಂದಿಟ್ಟಿದೆ. ಆದರೆ, ಮಗು ಹುಟ್ಟಿರುವುದಕ್ಕೂ ಆರ್ಸಿಬಿ ಕಪ್ ಗೆದ್ದಿದೆ ಎನ್ನುವುದಕ್ಕೂ ಎತ್ತಣದಿಂದೆತ್ತ ಎಂಬ ಪ್ರಶ್ನೆ ನಿಮ್ಮಲ್ಲಿ ಕಾಡುತ್ತಿರಬಹುದು.
ಆದರೆ, ಅಭಿಮಾನಿಗಳಲ್ಲಿ ಈ ನಂಬಿಕೆ ಬರಲು ಇರುವ ಲಾಜಿಕ್ ಅಂದರೆ, ಭಾರತದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್. ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಅವರಿಗೆ ಹೆಣ್ಣು ಮಗು ಜನಿಸಿದ ವರ್ಷ ಐಪಿಎಲ್ ಟ್ರೋಫಿಗೆ ಮುತ್ತಿಕ್ಕಿದ್ದಾರೆ. ಹಾಗಾಗಿ, ಈ ವರ್ಷ ವಿರಾಟ್ ಕೊಹ್ಲಿ ಟೀಂ ಕಪ್ ಗೆಲ್ಲಲಿದೆ ಎನ್ನುತ್ತಿದ್ದಾರೆ ಆರ್ಸಿಬಿ ಅಭಿಮಾನಿಗಳು.
ಇದನ್ನೂ ಓದಿ...ವಿರುಷ್ಕಾ ಮಗಳ ಮೊದಲ ಫೋಟೋ ಹಂಚಿಕೊಂಡ ವಿರಾಟ್ ಸಹೋದರ
ಗೌತಮ್ ಗಂಭೀರ್ಗೆ 2014 ಮತ್ತು ರೋಹಿತ್ ಶರ್ಮಾಗೆ 2019 ಅದೃಷ್ಟದ ವರ್ಷಗಳು ಎನ್ನಲಾಗುತ್ತದೆ. 2014ರ ಮೇ 1ರಂದು ಗಂಭೀರ್ ಮನೆಗೆ ಮಹಾಲಕ್ಷ್ಮಿ ಆಗಮಿಸಿದಳು. ಅದೇ ವರ್ಷ ಗಂಭೀರ್ ನಾಯಕತ್ವ ವಹಿಸಿದ್ದ ಕೋಲ್ಕತಾ ನೈಟ್ ರೈಡರ್ ತಂಡ ಪ್ರಶಸ್ತಿ ಜಯಿಸಿತ್ತು. ಜೂನ್ 1ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಕೋಲ್ಕತಾ 3 ವಿಕೆಟ್ಗಳ ಅಂತರದಲ್ಲಿ ಗೆಲುವಿನ ನಗೆ ಬೀರಿತು. ಈ ಮೂಲಕ ಎರಡನೇ ಬಾರಿ ಪ್ರಶಸ್ತಿ ಗೆದ್ದಂತಾಯಿತು.
2019ರ ರೋಹಿತ್ ಶರ್ಮಾಗೆ ಲಕ್ಕಿ ಇಯರ್ ಎನ್ನಬಹುದು. ಯಾಕೆಂದರೆ, 2018ರ ಡಿಸೆಂಬರ್ 30ರಂದು ರೋಹಿತ್ ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ನಂತರ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡ 2019ರ ಮೇ 12ರಂದು ಹೈದರಾಬಾದ್ನ ರಾಜೀವ್ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ನ ತಂಡವನ್ನು ಮಣಿಸಿ 4ನೇ ಬಾರಿ ಐಪಿಎಲ್ ಟ್ರೋಫಿ ಎತ್ತಿ ಹಿಡಿದಿದ್ದರು.
ಹೀಗಾಗಿ, ಅನುಷ್ಕಾ ಕೂಡ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, 2021ರ ವರ್ಷ ವಿರಾಟ್ ಕೊಹ್ಲಿ ಅದೃಷ್ಟದ ವರ್ಷವಾಗಲಿದೆ ಎಂದೇ ಅಭಿಮಾನಿಗಳು ಭಾವಿಸುತ್ತಿದ್ದಾರೆ. ಆದರೆ, ಆರ್ಸಿಬಿ ಕಪ್ ಗೆಲ್ಲುತ್ತೋ, ಮತ್ತದೇ ಚಾಳಿ ಮುಂದುವರೆಸುತ್ತೋ ಗೊತ್ತಿಲ್ಲ. ಕೊಹ್ಲಿ ಹೆಣ್ಣು ಮಗುವಿನ ಅಪ್ಪನಾಗಿರುವುದೇ ಆರ್ಸಿಬಿ ಅಭಿಮಾನಿಗಳಲ್ಲಿ ಒಂದು ನಂಬಿಕೆ ಬರುವಂತೆ ಮಾಡಿದೆ. ಈ ಬಾರಿಯ ಐಪಿಎಲ್ ಏಪ್ರಿಲ್-ಮೇ ನಡುವೆ ನಡೆಯುವ ಸಾಧ್ಯತೆ ಇದೆ.
ಫೆಬ್ರವರಿಯಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ. ಕಳೆದ ವರ್ಷ ಕೋವಿಡ್-19 ನಡುವೆಯೇ ಪ್ರೇಕ್ಷಕರಿಲ್ಲದ ಅಂಗಳದಲ್ಲಿ ನಡೆದ ಟೂರ್ನಿಯಲ್ಲಿ ಆರ್ಸಿಬಿ 4ನೇ ಸ್ಥಾನ ಪಡೆದಿತ್ತು. ಮೊಟ್ಟಮೊದಲ ಬಾರಿಗೆ ಫೈನಲ್ಗೇರಿದ್ದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಗೆದ್ದು 5ನೇ ಬಾರಿ ಟ್ರೋಫಿ ಎತ್ತಿ ಹಿಡಿದಿತ್ತು.