ನವದೆಹಲಿ: ಭಾರತ-ಚೀನಾ ನಡುವೆ ಅಂತಾರಾಷ್ಟ್ರೀಯ ಗಡಿಯಲ್ಲಿ ಹಿಂಸಾತ್ಮಕ ಸಂಘರ್ಷದ ಬಳಿಕ ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೈಟಲ್ ಪ್ರಾಯೋಜಕತ್ವದಿಂದ ಚೀನಾದ ಮೊಬೈಲ್ ಕಂಪನಿ ವಿವೋಗೆ ಗೇಟ್ ಪಾಸ್ ನೀಡಲಾಗಿದೆ. ಹೀಗಾಗಿ ಟೈಟಲ್ ಪ್ರಾಯೋಜಕತ್ವ ಪಡೆದುಕೊಳ್ಳಲು ಇದೀಗ ಕೆಲ ಕಂಪನಿಗಳ ನಡುವೆ ಸ್ಪರ್ಧೆ ಏರ್ಪಟ್ಟಿದೆ.
ಈ ಹಿನ್ನೆಲೆಯಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಶೀಘ್ರದಲ್ಲಿಯೇ ಬಿಡ್ ಕರೆಯಲಿದೆ. ಈ ಬಿಡ್‌ನಲ್ಲಿ ಭಾಗಿಯಾಗಲು ಪ್ರಮುಖವಾಗಿ ಅಮೆಜಾನ್, ಜಿಯೋ ಹಾಗೂ ಬೈಜುಸ್ ಕಂಪನಿಗಳು ಪೈಪೋಟಿಗಿಳಿದಿವೆ ಎಂದು ತಿಳಿದು ಬಂದಿದೆ. ಇದರ ಜತೆಗೆ ಕೋಕಕೋಲಾ ಇಂಡಿಯಾ, ಫೋನ್ ಪೇ, ಅನ್ ಅಕಾಡೆಮಿ ಕೂಡ ಸ್ಪರ್ಧೆಯಲ್ಲಿವೆ.
ಈ ಹಿಂದೆ, ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವ ಪಡೆದಿದ್ದ ವಿವೋ ಬಿಸಿಸಿಐನೊಂದಿಗೆ 5 ವರ್ಷಗಳಿಗೆ 2,199 ಕೋಟಿ ರೂಗಳ ಒಪ್ಪಂದ ಮಾಡಿಕೊಂಡಿತ್ತು. ಈಗಾಗಲೇ ಎರಡು ವರ್ಷಗಳ ಒಪ್ಪಂದದ ಅವಧಿ ಮುಗಿದಿದೆ. ಬಿಸಿಸಿಐ ಮತ್ತು ವಿವೋ ನಡುವೆ ಇನ್ನೂ 1,320 ಕೋಟಿ ರೂಗಳ ಮೂರು ವರ್ಷದ ಒಪ್ಪಂದ ಬಾಕಿ ಉಳಿದಿತ್ತು.
2021ರಿಂದ 2023ರ ಆವೃತ್ತಿಗೆ ವಿವೋ ಐಪಿಎಲ್ಗೆ ಟೈಟಲ್ ಪ್ರಾಯೋಜಕತ್ವಕ್ಕೆ ಮರಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಸೆಪ್ಟೆಂಬರ್ 19 ರಿಂದ ನವೆಂಬರ್ 10 ರವರೆಗೆ ಯುಎಇನಲ್ಲಿ ಐಪಿಎಲ್ ಟೂರ್ನಿ ನಡೆಯಲಿದೆ.