ಕೋಲ್ಕತ್ತಾ: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಈ ಹಿಂದೆ ಬ್ಯಾಟ್ ಬೀಸಿದ್ದ ನ್ಯೂಜಿಲ್ಯಾಂಡ್ ತಂಡದ ಮಾಜಿ ಸ್ಪೋಟಕ ಬ್ಯಾಟ್ಸಮನ್ ಬ್ರೆಂಡನ್ ಮೆಕಲಂ ಇದೀಗ ಅದೇ ತಂಡದ ಮುಖ್ಯ ಕೋಚ್ ಆಗಿ ಆಯ್ಕೆಯಾಗಿದ್ದಾರೆ.
ಈ ಹಿಂದೆ ತಂಡಕ್ಕೆ ಮುಖ್ಯ ಕೋಚ್ ಆಗಿ ದಕ್ಷಣ ಆಫ್ರಿಕಾದ ಮಾಜಿ ಆಟಗಾರ ಜಾಕ್ ಕಾಲಿಸ್ ಹಾಗೂ ಸಹಾಯಕ ಕೋಚ್ ಆಗಿ ಆಸ್ಟ್ರೇಲಿಯಾದ ಸೈಮನ್ ಕಾಟಿಚ್ ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಮುಖ್ಯ ಕೋಚ್ ಆಗಿ ಮೆಕಲಂ ಆಯ್ಕೆಗೊಂಡಿದ್ದು, ಕೆಕೆಆರ್ ಪ್ರಾಂಚೈಸಿ ತನ್ನ ಟ್ವೀಟರ್ನಲ್ಲಿ ಅಧಿಕೃತ ಮಾಹಿತಿ ಹೊರಹಾಕಿದೆ.
ಈಗಾಗಲೇ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ 2008ರಲ್ಲಿ ಬ್ರೆಂಡನ್ ಮೆಕಲಂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಬ್ಯಾಟ್ ಬೀಸಿರುವ ಅನುಭವ ಹೊಂದಿದ್ದಾರೆ. ಜತೆಗೆ 2009ರ ಆವೃತ್ತಿಯಲ್ಲಿ ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ 158 ರನ್ಗಳಿಸಿದ್ದರು. ಇದೀಗ ಅದೇ ತಂಡದ ಕೋಚ್ ಆಗಿ ಆಯ್ಕೆಯಾಗಿದ್ದಾರೆ.ಕೆಕೆಆರ್ ತಂಡದ ಸಿಇಒ ವೆಂಕಿ ಮೈಸೂರು ಮಾಹಿತಿ ನೀಡಿರುವ ಪ್ರಕಾರ, ಕಾಲಿಸ್ ಜತೆಗೆ ನಮ್ಮ ತಂಡದ ಸಂಬಂಧ ಅದ್ಭುತವಾಗಿದ್ದು, ಇನ್ಮುಂದೆ ಅದು ನೆನಪಿನಲ್ಲಿ ಉಳಿದುಕೊಳ್ಳಲಿದೆ ಎಂದಿದ್ದಾರೆ.
ಇದೇ ವಿಷಯಕ್ಕೆ ಸಂಬಂಧಸಿದಂತೆ ಪ್ರತಿಕ್ರಿಯೆ ನೀಡಿರುವ ಬ್ರೆಂಡನ್ ಮೆಕಲಂ, ಈ ಹುದ್ದೆಯ ಸವಾಲು ಸ್ವೀಕಾರ ಮಾಡುವುದು ನನಗೆ ಸಿಗುತ್ತಿರುವ ಗೌರವ, ಇಂತಹ ಜವಾಬ್ದಾರಿಯನ್ನ ವಹಿಸಿಕೊಳ್ಳುವುದು ನಿಜಕ್ಕೂ ದೊಡ್ಡ ಗೌರವ. ಕೆಕೆಆರ್ ಮತ್ತು ಟಿಕೆಆರ್ ಎರಡರಲ್ಲೂ ಅದ್ಭುತ ತಂಡಗಳಾಗಿದ್ದು, ಸಹಾಯಕ ಸಿಬ್ಬಂದಿಯೊಂದಿಗೆ ಎರಡೂ ಫ್ರಾಂಚೈಸಿಗಳ ಯಶಸ್ವಿಗಾಗಿ ಹೆಚ್ಚು ಪ್ರಯತ್ನ ಮಾಡುವೆ ಎಂದು ಹೇಳಿದ್ದಾರೆ.
ಕಿವೀಸ್ ತಂಡದ ಪರ 260 ಏಕದಿನ ಪಂದ್ಯಗಳನ್ನಾಡಿರುವ ಈ ಪ್ಲೇಯರ್ 6,083 ರನ್,101 ಟೆಸ್ಟ್ ಪಂದ್ಯಗಳಿಂದ 6,453 ರನ್ ಕಲೆಹಾಕಿದ್ದಾರೆ. 302ರನ್ಗಳಿಸಿರುವುದು ಇವರ ಟೆಸ್ಟ್ನ ಅತಿ ದೊಡ್ಡ ಸ್ಕೋರ್ ಆಗಿದೆ.