ಚೆನ್ನೈ: 2020ರ ಐಪಿಎಲ್ನಲ್ಲಿ ಮಂದಗತಿಯ ಪ್ರದರ್ಶನದ ಹೊರ ತಾಗಿಯೂ ಆಸ್ಟ್ರೇಲಿಯಾದ ಆಲ್ರೌಂಡರ್ ಗ್ಲೇನ್ ಮ್ಯಾಕ್ಸ್ವೆಲ್ ಅವರು ನಾಳೆ ಚೆನ್ನೈನಲ್ಲಿ ನಡೆಯಲಿರುವ ಮಿನಿ ಹರಾಜಿನಲ್ಲಿ ಮೋಯಿನ್ ಅಲಿ ಜೊತೆಗೆ ಎಲ್ಲ ಪ್ರಾಂಚೈಸಿಗಳ ನೆಚ್ಚಿನ ಆಟಗಾರರಾಗಿದ್ದಾರೆ.
ಮಿನಿ ಹರಾಜಿನಲ್ಲಿ ಒಟ್ಟು 292 ಆಟಗಾರರಿದ್ದಾರೆ. ಅವರಲ್ಲಿ 164 ಭಾರತೀಯರು ಮತ್ತು 125 ವಿದೇಶಿ ಆಟಗಾರರು ಹಾಗೂ 3 ಅಸೋಸಿಯೇಟ್ ರಾಷ್ಟ್ರಗಳ ಆಟಗಾರರು ಸೇರಿದ್ದಾರೆ.
8 ಫ್ರಾಂಚೈಸಿಗಳಿಂದ ಒಟ್ಟು 61 ಆಟಗಾರರನ್ನು ಖರೀದಿಸಲು ಅವಕಾಶವಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು 11 ಆಟಗಾರರನ್ನು ಖರೀದಿಸಬಹುದಾಗಿದೆ. ಫ್ರಾಂಚೈಸಿ ಬಳಿ 35.4 ಕೋಟಿ ರೂ. ಹಣವಿದೆ. ಸನ್ರೈಸರ್ಸ್ ಬಳಿ 10.75 ಕೋಟಿ ರೂ. ಇದ್ದು ಅವರು 3 ಆಟಗಾರರನ್ನು ಖರೀದಿಸಬಹುದಾಗಿದೆ.
ಪಂಜಾಬ್ ಕಿಂಗ್ಸ್ ತಂಡದ ಬಳಿ ಗರಿಷ್ಠ ಹಣವಿದೆ. ಅನಿಲ್ ಕುಂಬ್ಳೆ ಕೋಚಿಂಗ್ನಲ್ಲಿ ಪಳಗುತ್ತಿರುವ ಫ್ರಾಂಚೈಸಿ 9 ಆಟಗಾರರನ್ನು ಖರೀದಿಸಬೇಕಿದ್ದು, 53.20 ಕೋಟಿ ರೂ. ಪರ್ಸ್ ಹೊಂದಿದೆ.
ಮ್ಯಾಕ್ಸ್ವೆಲ್ ಆಸೀಸ್ ನಾಯಕ ಸ್ಟೀವ್ ಸ್ಮಿತ್ ಜೊತೆಗೆ 2 ಕೋಟಿ ಮೂಲ ಬೆಲೆ ವಿಭಾಗದಲ್ಲಿದ್ದಾರೆ. ಇನ್ನು, ಈ ಬಾರಿ ಐಪಿಎಲ್ ಹರಾಜಿನಲ್ಲಿ ಅವಕಾಶ ಪಡೆಯುವಲ್ಲಿ ಯಶಸ್ವಿಯಾಗಿರುವ ವಿಶ್ವದ ನಂಬರ್ 1 ಬ್ಯಾಟ್ಸ್ಮನ್ ಡೇವಿಡ್ ಮಲನ್ ಮೇಲೆ ಕೂಡ ಎಲ್ಲಾ ಫ್ರಾಂಚೈಸಿಗಳು ಕಣ್ಣಿಟ್ಟಿವೆ. ಅವರ ಮೂಲ ಬೆಲೆ 1.5 ಕೋಟಿ ರೂ.ಆಗಿದೆ.
19 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ 150 ಸರಾಸರಿಯಲ್ಲಿ ರನ್ಗಳಿಸಿರುವ ಮಲನ್ ಅವರನ್ನು ಕಳೆದ ಬಾರಿ ಪ್ಲೇ ಆಫ್ ಪ್ರವೇಶಿಸಲು ವಿಫಲವಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ಬಿಡ್ ಮಾಡುವ ಸಾಧ್ಯತೆಯಿದೆ. ಯಾಕೆಂದರೆ, ಶೇನ್ ವ್ಯಾಟ್ಸ್ನ್ ನಿವೃತ್ತಿ ಹೊಂದಿದ್ದು, ಸಿಎಸ್ಕೆಗೆ ಒಬ್ಬ ಬಲಿಷ್ಠ ಆರಂಭಿಕ ಬ್ಯಾಟ್ಸ್ಮನ್ ಅವಶ್ಯಕತೆಯಿದೆ.
ಸಿಎಸ್ಕೆ 19.90 ಕೋಟಿ ರೂ. ಹಣ ಹೊಂದಿದ್ದು, 6 ಆಟಗಾರರನ್ನು ಕೊಳ್ಳಬಹುದಾಗಿದೆ. ಧೋನಿ ನೇತೃತ್ವದ ಸಿಎಸ್ಕೆ ಯುವ ಸ್ಪೋಟಕ ಆಟಗಾರಿಗಿಂತ ಯಾವಾಗಲೂ ಅನುಭವಿ ಆಟಗಾರರಿಗೆ ಹೆಚ್ಚು ಪ್ರಾಮುಖ್ಯತೆ ನೀಡುವುದರಿಂದ ಮಲನ್ ಅವರನ್ನು ಖರೀದಿಸುವ ರೇಸ್ನಲ್ಲಿ ಹಳದಿ ಪಡೆ ಮುಂದಿದೆ ಎನ್ನಲಾಗುತ್ತಿದೆ.
ಇವರಲ್ಲದೆ ದೇಶಿ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ತೋರಿರುವ ಕೇರಳದ ಮೊಹಮ್ಮದ್ ಅಜರುದ್ದೀನ್, ತಮಿಳುನಾಡಿನ ಶಾರುಖ್ ಖಾನ್, ಆಲ್ರೌಂಡರ್ ಸೋನು ಯಾದವ್, ಬರೋಡದ ವಿಷ್ಣು ಸೋಲಂಕಿ, ಬೆಂಗಾಲ್ನ ಅಕಾಶ್ ದೀಪ್ರತ್ತ ಕೂಡ ಫ್ರಾಂಚೈಸಿಗಳು ಗಮನ ಹರಿಸಿದ್ದಾರೆ.
ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಬಳಿ 15.35 ಕೋಟಿ ರೂ., ಡೆಲ್ಲಿ ಕ್ಯಾಪಿಟಲ್ಸ್ ಬಳಿ 13.40 ಕೋಟಿ ರೂ. ಇದೆ. ಎರಡೂ ತಂಡಗಳು ಕ್ರಮವಾಗಿ 7 ಮತ್ತು 8 ಆಟಗಾರರನ್ನು ಕೊಳ್ಳಬಹುದಾಗಿದೆ. ರಾಜಸ್ಥಾನ್ ರಾಯಲ್ಸ್ 37.85 ಕೋಟಿ ರೂ. ಹೊಂದಿದ್ದು 9 ಆಟಗಾರರಿಗಾಗಿ ಬಿಡ್ ಮಾಡಲಿದೆ.