ಮುಂಬೈ : ಪ್ರತಿ ಮಹತ್ವಾಕಾಂಕ್ಷಿ ಕ್ರಿಕೆಟಿಗನೂ ಕ್ರಿಕೆಟ್ ಮೈದಾನದಲ್ಲಿ ಲೆಜೆಂಡರಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಎಂ ಎಸ್ ಧೋನಿ ಕ್ರಿಕೆಟ್ ಜಗತ್ತಿನಲ್ಲಿ ಏನು ಸಾಧಿಸಿದ್ದಾರೋ ಅದನ್ನು ಅನುಕರಿಸಲು ನೋಡುತ್ತಾರೆ. ಆದರೆ, ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಕ್ರಿಕೆಟ್ನಲ್ಲಿ ತಮ್ಮದೇ ಆದ ಹಾದಿ ನಿರ್ಮಿಸಲು ಬಯಸುತ್ತೇನೆಂದು ಹೇಳಿದ್ದಾರೆ. ಹಾಗೆಯೇ, ಯಾವೊಬ್ಬ ಕ್ರಿಕೆಟಿಗನಿಂದಲೂ ಸಿಎಸ್‌ಕೆ ನಾಯಕನಂತೆ ಇರಲು ಸಾಧ್ಯವಿಲ್ಲ ಎಂದಿದ್ದಾರೆ.
"ಎಂಎಸ್ ಧೋನಿ ರೀತಿ ಇರಲು ಯಾರಿಂದಲೂ ಸಾಧ್ಯವಿಲ್ಲ ಎಂದು ನಾನು ಭಾವಿಸುತ್ತೇನೆ. ಜೊತೆಗೆ ನಾನು ನಾನಾಗಿರಲು ಇಷ್ಟಪಡುತ್ತೇನೆ. ನನಗೆ ಸಂಜು ಸ್ಯಾಮ್ಸನ್ ಅನ್ನೋದೆ ಸಾಕಷ್ಟು ಉತ್ತಮವೆನಿಸುತ್ತದೆ" ಎಂದು 2021ರ ಐಪಿಎಲ್ ಆವೃತ್ತಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಮುನ್ನಡೆಸುತ್ತಿರುವ ಸ್ಯಾಮ್ಸನ್ ರಾಯಲ್ಸ್ ವೆಬ್ಸೈಟ್ಗೆ ತಿಳಿಸಿದ್ದಾರೆ.
ಇದನ್ನು ಓದಿ:ರಿಷಭ್ ಪಂತ್ ಒಬ್ಬ ಪರಿಪೂರ್ಣ ಮ್ಯಾಚ್ ವಿನ್ನರ್ : ಸೌರವ್ ಗಂಗೂಲಿ
ರಾಯಲ್ಸ್ 2020ರ ಆವೃತ್ತಿಯಲ್ಲಿ ಕೊನೆಯ ಸ್ಥಾನ ಪಡೆದ ನಂತರ ನಾಯಕ ಸ್ಟೀವ್ ಸ್ಮಿತ್ರನ್ನು ತಂಡದಿಂದ ಕೈಬಿಟ್ಟು, ಯುವ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ರನ್ನು ನಾಯಕನನ್ನಾಗಿ ನೇಮಿಸಿತ್ತು. ಕಳೆದ ವರ್ಷ ಟೂರ್ನಿಯಲ್ಲಿ ಉತ್ತಮ ಆರಂಭ ಕಂಡರೂ ಮಧ್ಯದಲ್ಲಿ ಕೆಲ ನಿರ್ಣಾಯಕ ಪಂದ್ಯಗಳಲ್ಲಿ ಸೋಲುಂಡಿತು. ಇಂತಹ ಕಠಿಣ ಸಂದರ್ಭದಲ್ಲಿ ತಮ್ಮ ತಂಡದ ಪರ ನಿಂತ ಅಭಿಮಾನಿಗಳಿಗೆ ಸ್ಯಾಮ್ಸನ್ ಧನ್ಯವಾದ ಅರ್ಪಿಸಿದ್ದಾರೆ.
"ಏನೇ ಆದರೂ ನಮ್ಮ ತಂಡದ ಪರ ನಿಲ್ಲುವ, ಬೆಂಬಲಿಸುವ ಪ್ರತಿ ಅಭಿಮಾನಿಗೂ ನಾನು ಧನ್ಯವಾದ ಸಲ್ಲಿಸಲು ಬಯಸುತ್ತೇನೆ. ಈ ಬಾರಿ ನಿಮಗಾಗಿ ಉತ್ತಮ ಕ್ರಿಕೆಟ್ ಆಡಿ ನಿಮ್ಮ ಮುಖದಲ್ಲಿ ನಗು ಮೂಡುವಂತೆ ಮಾಡುತ್ತೇವೆ ಎಂದು ನಾನು ಭರವಸೆ ನೀಡುತ್ತೇನೆ" ಎಂದು ಸ್ಯಾಮ್ಸನ್ ತಿಳಿಸಿದ್ದಾರೆ.