ಚೆನ್ನೈ: ಭಾರತ ತಂಡದ ಅನುಭವಿ ಸ್ಪಿನ್ನರ್ ಹರ್ಭಜನ್ ಸಿಂಗ್ ಬರೋಬ್ಬರಿ 699 ದಿನಗಳ ನಂತರ ಸ್ಪರ್ಧಾತ್ಮಕ ಕ್ರಿಕೆಟ್ಗೆ ಮರಳಿದ್ದಾರೆ. 2019ರ ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಮುಂಬೈ ವಿರುದ್ಧದ ಫೈನಲ್ ಪಂದ್ಯದಲ್ಲಿ ಭಜ್ಜಿ ಕೊನೆಯದಾಗಿ ಮೈದಾನದಲ್ಲಿ ಕಾಣಿಸಿಕೊಂಡಿದ್ದರು.
ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ದೂರವಿರುವ ಹರ್ಭಜನ್ ಸಿಂಗ್ 2019ರ ಐಪಿಎಲ್ ಫೈನಲ್ ಪಂದ್ಯದ ನಂತರ ರಣಜಿ ಕ್ರಿಕೆಟ್ ಸೇರಿದಂತೆ ಯಾವುದೇ ಮಾದರಿಯ ಕ್ರಿಕೆಟ್ನಲ್ಲಿ ಕಾಣಿಸಿಕೊಂಡಿಲ್ಲ. ಇದೀಗ 699 ದಿನಗಳ ಬಳಿಕ ಮತ್ತೆ ಮೈದಾನದಲ್ಲಿ ಕಾಣಿಸಿಕೊಂಡಿದ್ದಾರೆ.
40 ವರ್ಷದ ಹರ್ಭಜನ್ ಸಿಂಗ್ರನ್ನು ಇದೇ ಫೆಬ್ರವರಿಯಲ್ಲಿ ನಡೆದಿದ್ದ ಹರಾಜಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಮೂಲ ಬೆಲೆ 2 ಕೋಟಿ ರೂ.ಗಳಿಗೆ ಖರೀದಿಸಿತ್ತು. ಇದೀಗ ಮೊದಲ ಪಂದ್ಯದಲ್ಲೇ ಅವಕಾಶ ನೀಡಿ ಅಚ್ಚರಿ ಮೂಡಿಸಿದೆ. ಹರ್ಭಜನ್ ಕಳೆದ ವರ್ಷ ವೈಯಕ್ತಿಕ ಕಾರಣಗಳಿಂದ ಐಪಿಎಲ್ನಲ್ಲಿ ಆಡಿರಲಿಲ್ಲ.
2018ರಿಂದ ಚೆನ್ನೈ ಸೂಪರ್ ಕಿಂಗ್ಸ್ನಲ್ಲಿ ಆಡಿದ್ದ ಹರ್ಭಜನ್ ಸಿಂಗ್ ಚೆಪಾಕ್ನಲ್ಲಿ ಉತ್ತಮ ದಾಖಲೆ ಹೊಂದಿರುವುದಕ್ಕೆ ಇಂದಿನ ಪಂದ್ಯದಲ್ಲಿ ಅವಕಾಶ ಪಡೆದಿದ್ದಾರೆ. ಭಜ್ಜಿ ಐಪಿಎಲ್ನಲ್ಲಿ ಮುಂಬೈ ಮತ್ತು ಚೆನ್ನೈ ಸೇರಿದಂತೆ 161 ಪಂದ್ಯಗಳನ್ನಾಡಿದ್ದು, 150 ವಿಕೆಟ್ ಪಡೆದಿದ್ದಾರೆ.
ಇದನ್ನು ಓದಿ:ಹರ್ಭಜನ್ ಸಿಂಗ್ ನಮ್ಮ ಸ್ಪಿನ್ ಬೌಲಿಂಗ್ ವಿಭಾಗವನ್ನು ಬಲಪಡಿಸಲಿದ್ದಾರೆ: ಇಯಾನ್ ಮಾರ್ಗನ್