ಚೆನ್ನೈ: ಶುಕ್ರವಾರದಿಂದ ಚೆನ್ನೈನಲ್ಲಿ ಆರಂಭವಾಗಲಿರುವ 14ನೇ ಆವೃತ್ತಿಯ ಐಪಿಎಲ್ನ ಉದ್ಘಾಟನಾ ಪಂದ್ಯಕ್ಕೆ ಭಾರತ ವಿಶೇಷ ಚೇತನ ಕ್ರಿಕೆಟ್ ಮಂಡಳಿಯ ಪದಾಧಿಕಾರಿಗಳಿಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಆಹ್ವಾನ ನೀಡಿದ್ದಾರೆ.
ಕೊಹ್ಲಿ ನೇತೃತ್ವದ ಆರ್ಸಿಬಿ ಶುಕ್ರವಾರ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು 14ನೇ ಆವೃತ್ತಿಯ ಐಪಿಎಲ್ನ ಉದ್ಘಾಟನಾ ಪಂದ್ಯದಲ್ಲಿ ಎದುರಿಸಲಿದೆ.
ವಿಶ್ವದ ಅತಿದೊಡ್ಡ ಟಿ-20 ಟೂರ್ನಮೆಂಟ್ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲು ನಮ್ಮನ್ನು ಆಹ್ವಾನಿಸಿದ್ದಕ್ಕಾಗಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರಿಗೆ ನಾವು ತುಂಬಾ ಕೃತಜ್ಞರಾಗಿರುತ್ತೇವೆ. ಮೊದಲಿನಿಂದಲೂ ಅವರು ನಮ್ಮನ್ನು ಬಹಳ ಪ್ರೋತ್ಸಾಹಿಸುತ್ತಿದ್ದರು ಮತ್ತು ದೇಶದಲ್ಲಿ ವಿಶೇಷ ಚೇತನರ ಕ್ರಿಕೆಟ್ಅನ್ನು ಉತ್ತೇಜಿಸುತ್ತಿದ್ದಾರೆ" ಎಂದು ಡಿಸಿಸಿಐ(ಡಿಫರೆಂಟ್ಲಿ ಏಬಲ್ಡ್ ಕ್ರಿಕೆಟ್ ಅಸೋಸಿಯೇಷನ್) ಅಧ್ಯಕ್ಷ ಮಹಂತೇಶ್ ಜಿ.ಕೆ. ಕೃತಜ್ಞತೆ ತಿಳಿಸಿದ್ದಾರೆ.
ನಾಳೆ ಚೆನ್ನೈನಲ್ಲಿ ಆರಂಭವಾಗಲಿರುವ ಪಂದ್ಯಕ್ಕೆ ಮಹಂತೇಶ್ ಜಿ.ಕೆ. ಜೊತೆಗೆ ಉಪಾಧ್ಯಕ್ಷ ಸುಮಿನ್ ಜೈನ್, ಕಾರ್ಯದರ್ಶಿ ರವಿ ಚೌಹಾಣ್, ಜಂಟಿ ಕಾರ್ಯದರ್ಶಿ ಅಭಯ್ ಪ್ರತಾಪ್ ಸಿಂಗ್ ಮತ್ತು ಖಜಾಂಚಿ ಜಾನ್ ಡೇವಿಡ್ ಡಿಸಿಸಿಐ ಪರವಾಗಿ ಭಾಗವಹಿಸಲಿದ್ದಾರೆ.
ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ಐಪಿಎಲ್ ಆರಂಭಿಕ ಪಂದ್ಯವನ್ನು ವೀಕ್ಷಿಸಲು ಕಳೆದ ವಾರ ಬಿಸಿಸಿಐ ಕಾರ್ಯದರ್ಶಿ ಮಂಡಳಿಯ ಎಲ್ಲಾ ರಾಜ್ಯ ಅಂಗ ಸಂಸ್ಥೆಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳನ್ನು ಆಹ್ವಾನಿಸಿದ್ದರು.