ದುಬೈ: ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಅವರ ಉನ್ನತ ಫಾರ್ಮ್ ಖಂಡಿತ ಶ್ರೇಯಸ್ ಬಳಗಕ್ಕೆ ಬಹುದೊಡ್ಡ ಅನುಕೂಲವಾಗಲಿದೆ ಎಂದು ಭಾರತ ತಂಡದ ಮಾಜಿ ಆಟಗಾರ ಗೌತಮ್ ಗಂಭೀರ್ ಆಭಿಪ್ರಾಯ ಪಟ್ಟಿದ್ದಾರೆ.
ಇತ್ತೀಚೆಗೆ ಧವನ್ ಐಪಿಎಲ್‌ನಲ್ಲಿ ಸತತ ಎರಡು ಶತಕ ಸಿಡಿಸಿ ದಾಖಲೆ ಬರೆದಿದ್ದರು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದರು. ಅವರು ಸಿಎಸ್ಕೆ ವಿರುದ್ಧ 106 ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಅಜೇಯ 101 ರನ್ಗಳಿಸಿದ್ದರು. ಅವರು ಒಟ್ಟಾರೆ ಟೂರ್ನಿಯಲ್ಲಿ 11 ಪಂದ್ಯಗಳಲ್ಲಿ 2 ಶತಕ ಹಾಗೂ 2 ಅರ್ಧಶತಕ ಸಹಿತ 471 ರನ್ಗಳಿಸಿದ್ದಾರೆ.
ಆದರೆ ಕಳೆದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಧವನ್ ಕೇವಲ 6 ರನ್ಗಳಿಗೆ ಔಟಾಗುವ ಮೂಲಕ ನಿರಾಸೆ ಅನುಭವಿಸಿದ್ದರು.
"ಮೊದಲಿಗೆ ಹೇಳುವುದಾದರೆ, ಈ ದಾಖಲೆ(ಶತಕ ಸಿಡಿಸಿರುವುದು) ಬಹುದೊಡ್ಡ ಸಾಧನೆಯಾಗಿದೆ. ಯಾವುದೇ ಇತರ ಭಾರತೀಯ ಬ್ಯಾಟ್ಸ್‌ಮನ್ ಈ ಸಾಧನೆಯನ್ನು ಮಾಡಿಲ್ಲ. ಯಾವುದೇ ಕ್ರಿಕೆಟಿಗನಿಂದಲೂ ಐಪಿಎಲ್‌ನಲ್ಲಿ ಈ ಸಾಧನೆ ದಾಖಲಾಗಿಲ್ಲ. ಸತತ ಎರಡು ಶತಕ, ಅದರಲ್ಲೂ ಟಿ20 ಮಾದರಿಯಲ್ಲಿ. ಅದಕ್ಕಿಂತಲೂ ಡೆಲ್ಲಿ ತಂಡ ಅಗ್ರಸ್ಥಾನಕ್ಕೇರುವ ಸಂದರ್ಭದಲ್ಲಿ ಆ ಎರಡು ಶತಕ ಬಂದಿರುವುದು ಇಲ್ಲಿ ಪ್ರಮುಖ ವಿಷಯವಾಗುತ್ತದೆ" ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.
"ಅತ್ಯಂತ ಅನುಭವಿ ಬ್ಯಾಟ್ಸ್‌ಮನ್ ಈ ಸಂದರ್ಭದಲ್ಲಿ ಅತ್ಯುತ್ತಮ ರೂಪದಲ್ಲಿರುವುದು ಡೆಲ್ಲಿ ತಂಡಕ್ಕೆ ಒಂದು ದೊಡ್ಡ ಅನುಕೂಲವಾಗಿದೆ. ತಂಡವು ಪ್ಲೇಆಫ್ ಪ್ರವೇಶಿಸುತ್ತದೆ ಎಂಬುದರಲ್ಲಿ ಸಂದೇಹವಿಲ್ಲ, ಆದರೆ ನಿಮ್ಮ ಓಪನರ್ ಎರಡು ಬ್ಯಾಕ್-ಟು-ಬ್ಯಾಕ್ ಶತಕಗಳನ್ನು ದಾಖಲಿಸಿದ್ದಾರೆ. ಅದು ಕೇವಲ 69 ಮತ್ತು 57 ಎಸೆತಗಳಲ್ಲಿ ಎಂದರೆ ಇದು ಇದು ಡೆಲ್ಲಿ ಕ್ಯಾಪಿಟಲ್ಸ್ಗೆ ಒಳ್ಳೆಯ ಸುದ್ದಿ ಎಂದು ನಾನು ಭಾವಿಸುತ್ತೇನೆ ಮತ್ತು ಇದು ತಂಡಕ್ಕೆ ದೊಡ್ಡ ಅನುಕೂಲವಾಗಿದೆ "ಎಂದು ಅವರು ಹೇಳಿದ್ದಾರೆ.
ಪ್ರಸ್ತುತ ಡೆಲ್ಲಿ ಕ್ಯಾಪಿಟಲ್ಸ್ 11 ಪಂದ್ಯಗಳಿಂದ 4 ಸೋಲು ಮತ್ತು 7 ಗೆಲುವುಗಳೊಂದಿಗೆ 14 ಅಂಕವನ್ನು ಪಡೆದು ಎರಡನೇ ಸ್ಥಾನದಲ್ಲಿದೆ. ಮಂಗಳವಾರ ನಡೆಯುವ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ.