ದುಬೈ : ಸನ್ರೈಸರ್ಸ್ ತಂಡದ ಬೌಲಿಂಗ್ ಆಲ್ರೌಂಡರ್ ರಶೀದ್ ಖಾನ್ 13 ಆವೃತ್ತಿಯಲ್ಲಿ ಡೆತ್ ಓವರ್ಗಳಲ್ಲಿ ಅಬ್ಬರಿಸುವ ಮೂಲಕ ತಂಡಕ್ಕೆ ಗೆಲುವು ತಂದು ಕೊಡಲು ಪ್ರಯತ್ನಿಸುವುದಾಗಿ ಹೇಳಿದ್ದಾರೆ.
ಸೆಪ್ಟೆಂಬರ್ 21ರಂದು ರಾಯಲ್ ಚಾಲೆಂಜರ್ಸ್ ತಂಡದ ಸನ್ರೈಸರ್ಸ್ ಹೈದರಾಬಾದ್ ತನ್ನ ಮೊದಲ ಪಂದ್ಯವಾಡಲಿದೆ. ಈ ಪಂದ್ಯಕ್ಕೆ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣ ಆತಿಥ್ಯವಹಿಸಲಿದೆ.
ಇಂದು 22ನೇ ವಸಂತಕ್ಕೆ ಕಾಲಿಟ್ಟಿರುವ ರಶೀದ್ ಖಾನ್ ಮಾಧ್ಯಮದೊಂದಿಗೆ ಮಾತನಾಡುತ್ತಾ, ನನ್ನ ಮನಸ್ಸಿನಲ್ಲಿ ಯಾವಾಗಲು ಒಂದು ವಿಷಯ ಇರುತ್ತದೆ. ಅದೇನೆಂದ್ರೆ, ನಮ್ಮ ತಂಡ ಬ್ಯಾಟಿಂಗ್ ಮಾಡುವ ಸಂದರ್ಭದಲ್ಲಿ 3 ಅಥವಾ 4 ಓವರ್ಗಳು ಉಳಿದಿರುವಾಗಲೆಲ್ಲಾ , ನಾನು ಬ್ಯಾಟಿಂಗ್ ಮಾಡಿ ಉತ್ತಮ ಪ್ರದರ್ಶನ ನೀಡಬೇಕೆಂದು ಎಂದು ನಾನು ಭಾವಿಸುತ್ತೇನೆ.
ಇದು ತಂಡದ ಪರಿಸ್ಥಿತಿ ಹೇಗಿರಲಿದೆ ಎನ್ನುವುದರ ಮೇಲೆ ಅವಲಂಬಿತವಾಗಿರುತ್ತದೆ. ನಾನು ಬಿಗ್ಬ್ಯಾಶ್ನಲ್ಲಿ ಆಡುವ ಸಂದರ್ಭದಲ್ಲಿ ಅಲ್ಲಿನ ಕೋಚ್‌ಗಳು 15 ಓವರ್‌ಗಳ ಬಳಿಕ ನಾನು ಹೇಗೆ ಬ್ಯಾಟಿಂಗ್ ನಡೆಸಬೇಕೆಂಬುದನ್ನು ತಿಳಿಸಿದ್ದಾರೆ. ಯಾವಾಗ ಕೋಚ್ ಮತ್ತು ನಾಯಕನಿಂದ ನಿಮಗೆ ಬೆಂಬಲ ದೊರೆಯುತ್ತದೋ ಆವಾಗ ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ. ಇದು ನಿಜಕ್ಕೂ ಒಳ್ಳೆಯ ಸಂಗತಿ ಎಂದು ರಶೀದ್ ವರ್ಚುಲ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ನಾನು ಬ್ಯಾಟಿಂಗ್‌ನಲ್ಲಿ ಏನು ಸಾಧಿಸಬಲ್ಲೇ ಎಂದು ಹೆಚ್ಚು ಆಲೋಚಿಸುವುದಿಲ್ಲ. ಇಡೀ ಪಂದ್ಯದಲ್ಲಿ ತಂಡಕ್ಕಾಗಿ ಏನು ಮಾಡಬಲ್ಲೆ ಎನ್ನುವುದರ ಕಡೆ ಮಾತ್ರ ಗಮನ ನೀಡುತ್ತೇನೆ. ತಂಡದ ಯಶಸ್ಸಿಗೆ ಅತ್ಯುತ್ತಮ ಪ್ರದರ್ಶನ ನೀಡಲು ಪ್ರಯತ್ನಿಸುತ್ತೇನೆ ಎಂದಿದ್ದಾರೆ.
ಇದೇ ವೇಳೆ ಮುಂಬರುವ ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಎದುರಿನ ಹಣಾಹಣಿ ಕುರಿತಾಗಿ ಮಾತನಾಡಿದ ರಶೀದ್, 'ನೀವು ಯಾರಿಗೆ ಬೌಲಿಂಗ್ ಮಾಡಿದರೂ, ಬೌಲರ್ಗಳು ಒತ್ತದಲ್ಲಿರುತ್ತಾರೆ ಎಂದು ಆಲೋಚಿಸುತ್ತೇನೆ. ವಿರಾಟ್ ಮೂರೂ ಮಾದರಿಯ ಕ್ರಿಕೆಟ್‌ನಲ್ಲಿ ವಿಶ್ವ ಶ್ರೇಷ್ಠ ಬ್ಯಾಟ್ಸ್‌ಮನ್. ಅಂತಹ ಯಾರಾದ್ರೂ ಬ್ಯಾಟ್ಸ್‌ಮನ್ ನನ್ನ ಬೌಲಿಂಗ್ಗೆ ಆಡುತ್ತಿದ್ದರೆ ನಾನು ಅದನ್ನು ಇಷ್ಟಪಡುತ್ತೇನೆ.
ಇದೊಂದು ಅತ್ಯುತ್ತಮ ಸ್ಪರ್ಧೆಯಾಗಿದೆ. ಬೌಲರ್ ಆಗಿ ಅವರಿಗೆ ಬೌಲಿಂಗ್ ಮಾಡುವುದನ್ನು ನಾನು ಆನಂದಿಸುತ್ತೇನೆ. ನಿಜಕ್ಕೂ ಅವರಿಗೆ ಬೌಲಿಂಗ್ ಮಾಡುವುದು ಹೆಮ್ಮೆಯ ಸಂಗತಿ. ಅವರಿಗೆ ಉತ್ತಮ ಎಸೆತಗಳನ್ನು ಎಸೆಯಲು ಪ್ರಯತ್ನಿಸುತ್ತೇನೆ "ಎಂದು ರಶೀದ್ ಹೇಳಿದ್ದಾರೆ.