ಅಬುಧಾಬಿ: ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ನಿನ್ನೆ ಚಾಲನೆ ಸಿಕ್ಕಿದ್ದು, ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 5 ವಿಕೆಟ್ಗಳ ಜಯ ಸಾಧಿಸಿದೆ.
ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಮುಂಬೈ ತಂಡ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 162 ರನ್ ಗಳಿಸಿತು. ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ಕೇವಲ 5 ವಿಕೆಟ್ ಕಳೆದುಕೊಂಡು ಗುರಿ ಬೆನ್ನತ್ತಿ ಹಾಲಿ ಚಾಂಪಿಯನ್ಗೆ ಸೋಲಿನ ರುಚಿ ಉಣಿಸಿದೆ.
ಸೋಲಿನಲ್ಲಿ ಮುಂಬೈ ಹೊಸ ದಾಖಲೆ:
ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡ ಆರಂಭಿಕ ಪಂದ್ಯಗಳಲ್ಲಿ ಹೆಚ್ಚು ಸೋಲು ಕಂಡು ಹೊಸ ದಾಖಲೆ ನಿರ್ಮಾಣ ಮಾಡಿದೆ. 2013ರಿಂದ ಈವರೆಗೆ ಒಟ್ಟು 8 ಆರಂಭಿಕ ಪಂದ್ಯಗಳಲ್ಲಿ ಮುಂಬೈ ಸೋಲು ಕಂಡಿದೆ. ಈ ಮೂಲಕ ಆರಂಭಿಕ ಪಂದ್ಯಗಳಲ್ಲಿ ಅತಿ ಹೆಚ್ಚು ಸೋಲು ಕಂಡಿರುವ ತಂಡ ಎಂಬ ಖ್ಯಾತಿಗೆ ಪಾತ್ರವಾಗಿದೆ. ಇನ್ನು ಈ ಹಿಂದಿನ ಆವೃತ್ತಿಗಳಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಚೆನ್ನೈ ಸತತ 5 ಪಂದ್ಯಗಳಲ್ಲಿ ಸೋಲು ಕಂಡಿತ್ತು. ಆದರೆ 13ನೇ ಆವೃತ್ತಿ ಮೊದಲ ಪಂದ್ಯದಲ್ಲಿ ಗೆದ್ದು ಸೋಲಿನ ಸರಪಳಿ ಬಿಡಿಸಿಕೊಂಡಿದೆ.
2013ರಲ್ಲಿ ಆರ್ಸಿಬಿ ವಿರುದ್ಧ, 2014, 2015ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ, 2016, 2017ರಲ್ಲಿ ರಲ್ಲಿ ರೈಸಿಂಗ್ ಪುಣೆ ವಿರುದ್ಧ ಸೋಲು ಕಂಡಿದೆ. ಇದಾದ ಬಳಿಕ 2018ರಲ್ಲಿ ಚೆನ್ನೈ ವಿರುದ್ಧ, 2019ರಲ್ಲಿ ಡೆಲ್ಲಿ ಕ್ಯಾಪಿಟಲ್ ವಿರುದ್ಧ ಸೋಲು ಕಂಡಿರುವ ತಂಡ ಇದೀಗ 2020ರ ಮೊದಲ ಪಂದ್ಯದಲ್ಲಿ ಚೆನ್ನೈ ವಿರುದ್ಧ ಸೋಲಿನ ರುಚಿ ಕಂಡಿದೆ. ಇದರ ನಡುವೆ ಕೂಡ ತಂಡ ಅತಿ ಹೆಚ್ಚು ಸಲ ಚಾಂಪಿಯನ್ ಆಗಿ ಹೊರಹೊಮ್ಮಿರುವುದು ವಿಶೇಷವಾಗಿದೆ.