ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್‌ನ ಆಡಳಿತ ಮಂಡಳಿ ಆ. 2 ಭಾನುವಾರದಂದು ಸಭೆ ಸೇರಲಿದೆ. ಈ ವಾರ ಸಭೆ ನಡೆಯಲಿದೆ ಎಂದು ಐಪಿಎಲ್ ಅಧ್ಯಕ್ಷ ಬ್ರಿಜೇಶ್ ಪಟೇಲ್ ಈಗಾಗಲೇ ಮಾಹಿತಿ ನೀಡಿದ್ದು, ಮಂಡಳಿ ಸದಸ್ಯರಿಗೆ ನೋಟಿಸ್ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಐಪಿಎಲ್ ಜಿಸಿಯ ಅಧಿಕಾರಿಯೊಬ್ಬರು ಮಾತನಾಡಿ, ಸಭೆಯಲ್ಲಿ ಐಪಿಎಲ್ ವೇಳಾಪಟ್ಟಿ ಕುರಿತು ಚರ್ಚಿಸಲಾಗುವುದು. ಅಂತಿಮ ವೇಳಾಪಟ್ಟಿ ಮತ್ತು ಯುಎಇನಲ್ಲಿ ಉದ್ಘಾಟನಾ ಕಾರ್ಯಕ್ರಮ ಹಾಗೂ ಇತರೆ ವ್ಯವಸ್ಥೆಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗುವುದು ಎಂದು ತಿಳಿಸಿದ್ದಾರೆ.
ಭಾರತದಲ್ಲಿ ಕೊರೊನಾ ಕೇಕೆ ಮುಂದುವರಿಯುತ್ತಿರುವ ಪರಿಣಾಮ ಟೂರ್ನಿಯನ್ನು ಭಾರತದಿಂದ ಯುಎಇಗೆ ಸ್ಥಳಾಂತರ ಮಾಡಲಾಗಿದೆ. ಸೆಪ್ಟೆಂಬರ್ 19ರಿಂದ ನವೆಂಬರ್ 8ರವರೆಗೆ ಟೂರ್ನಮೆಂಟ್ ಯುಎಇನಲ್ಲಿ ನಡೆಯಲಿದೆ ಎನ್ನಲಾಗುತ್ತಿದೆ.
ಸಭೆಯಲ್ಲಿ ಎಂಟು ಫ್ರಾಂಚೈಸಿಗಳು ಪಂದ್ಯಾವಳಿಯ ವಿಧಾನಗಳ ಸ್ಪಷ್ಟ ಚಿತ್ರಣ ಪಡೆಯಲಿದ್ದಾರೆ. ಸಭೆಯ ನಂತರ ಎಸ್ಒಪಿ(Standard Operating Procedure)ಯನ್ನು ಫ್ರಾಂಚೈಸಿಗಳಿಗೆ ಹಸ್ತಾಂತರಿಸಲಾಗುವುದು ಎಂದು ಬಿಸಿಸಿಐನ ಮತ್ತೊಬ್ಬ ಉನ್ನತ ಅಧಿಕಾರಿ ತಿಳಿಸಿದ್ದಾರೆ.
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜಯ್ ಶಾ ಸೇರಿದಂತೆ ಬಿಸಿಸಿಐನ ಉನ್ನತ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿದು ಬಂದಿದೆ.