ದುಬೈ: ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ರಾಯುಡು ಹಾಗೂ ಆಲ್ರೌಂಡರ್ ಡ್ವೇನ್ ಬ್ರಾವೋ ಸಂಪೂರ್ಣ ಫಿಟ್ ಆಗಿದ್ದು, ಮುಂದಿನ ಪಂದ್ಯಕ್ಕೆ ಲಭ್ಯವಾಗಲಿದ್ದಾರೆ ಎಂದು ಸಿಎಸ್ಕೆ ಮೂಲಗಳಿಂದ ತಿಳಿದು ಬಂದಿದೆ.
ಆಡಿರುವ 10 ಆವೃತ್ತಿಗಳಲ್ಲೂ ಪ್ಲೇ ಆಫ್ ತಲುಪಿರುವ ಏಕೈಕ ತಂಡವಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಬಾರಿ ಸತತ ಎರಡು ಸೋಲಿನಿಂದ ಕಂಗೆಟ್ಟಿದೆ. ಮೊದಲ ಪಂದ್ಯ ಗೆದ್ದ ಬಳಿಕ, ಮುಂದಿನ ಎರಡೂ ಪಂದ್ಯಗಳಲ್ಲೂ ಬ್ಯಾಟಿಂಗ್ ವೈಫಲ್ಯ ಅನುಭವಿಸಿ ಸೋಲುಕಂಡಿದೆ.
ಮೊದಲ ಪಂದ್ಯದಲ್ಲಿ ಮುಂಬೈ ವಿರುದ್ಧ ಆಕರ್ಷಕ 71 ರನ್ ಸಿಡಿಸಿದ್ದ ರಾಯುಡು ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾಗಿದ್ದರು. ಆದೆ ಮಂಡಿರಜ್ಜು ಗಾಯಕ್ಕೆ ತುತ್ತಾಗಿದ್ದ ಅವರು ರಾಜಸ್ಥಾನ್ ಹಾಗೂ ಡೆಲ್ಲಿ ಕ್ಯಾಪಿಟಲ್ ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದರು ಮತ್ತು ತಂಡ ಹೀನಾಯ ಸೋಲುಕಂಡಿತ್ತು. ಬ್ರಾವೋ ಕೂಡ ಫಿಟ್ ಆಗದಿರುವುದರಿಂದ ಟೂರ್ನಿಯಲ್ಲಿ ಇನ್ನೂ ಕಾಣಿಸಿಕೊಂಡಿಲ್ಲ.
ಬ್ರಾವೋಈ ಮತ್ತು ರಾಯುಡು ಸಂಪೂರ್ಣ ಫಿಟ್ ಆಗಿದ್ದಾರೆ. ಅವರು ಮುಂದಿನ ಪಂದ್ಯದಲ್ಲಿ ಸಿಎಸ್ಕೆ ತಂಡಕ್ಕೆ ಮರಳಲಿದ್ದಾರೆ ಎಂದು ಸಿಎಸ್ಕೆ ಸಿಇಒ ಕೆಎಸ್ ವಿಶ್ವನಾಥನ್ ಹೇಳಿದ್ದಾರೆ. ರಾಯುಡು ಅಭ್ಯಾಸದ ಸಂದರ್ಭದಲ್ಲಿ ನೆಟ್ನಲ್ಲಿ ಚೆನ್ನಾಗಿ ಬ್ಯಾಟಿಂಗ್ ನಡೆಸಿದ್ದಾರೆ. ಬ್ರಾವೋ ಕೂಡ ಫಿಟ್ ಆಗಿದ್ದು, ಈಗಾಗಲೇ ಬೌಲಿಂಗ್ ಅಭ್ಯಾಸ ನಡೆಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಅಂಕ ಪಟ್ಟಿಯಲ್ಲಿ 1 ಗೆಲುವು ಮತ್ತು 2 ಸೋಲುಕಂಡಿರುವ ಸಿಎಸ್ಕೆ ಕೊನೆಯ ಸ್ಥಾನಕ್ಕೆ ಕುಸಿದಿದೆ. ಆದರೆ ಚೆನ್ನೈ ತಂಡ ಟೂರ್ನಿಯಲ್ಲಿ ತಿರುಗಿ ಬೀಳಲಿದೆ ಎಂದು ವಿಶ್ವನಾಥನ್ ಹೇಳಿದ್ದಾರೆ.