ಮುಂಬೈ: 2020ರ ಐಪಿಎಲ್ ಸೆಪ್ಟೆಂಬರ್ 19ರಿಂದ ಆರಂಭವಾಗಲಿದೆ. ಈಗಾಗಲೆ ತಂಡಗಳು ಮಿಲಿಯನ್ ಡಾಲರ್ ಟೂರ್ನಿಗಾಗಿ ಸಿದ್ಧತೆಯಲ್ಲಿ ತೊಡಗಿಕೊಂಡಿವೆ.
ಐಪಿಎಲ್ ಇತಿಹಾಸದಲ್ಲಿ ಸಾಮರ್ಥ್ಯವಿದ್ದರೂ ಒಮ್ಮೆಯೂ ಟ್ರೋಫಿ ಎತ್ತಿ ಹಿಡಿಯದ ಆರ್ಸಿಬಿ ತಂಡ ಈ ಬಾರಿ ತಂಡದಲ್ಲಿ ಆನೇಕ ಬದಲಾವಣೆಯನ್ನು ತರಲು ಪ್ರಯತ್ನಿಸುತ್ತಿದೆ. ಆರ್ಸಿಬಿ ತಂಡದ ಬಗ್ಗೆ ವಿಶ್ಲೇಷಣೆ ಮಾಡಿರುವ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಯುವ ಆಟಗಾರ ದೇವದತ್ ಪಡಿಕ್ಕಲ್ ಅವರನ್ನು ಆ್ಯರೋನ್ ಫಿಂಚ್ ಜೊತೆ ಆರಂಭಿಕರಾಗಿ ಕಣಕ್ಕಿಳಿಸುವಂತೆ ಸಲಹೆ ನೀಡಿದ್ದಾರೆ.
ಯುವ ಆಟಗಾರ ದೇವದತ್ ಪಡಿಕ್ಕಲ್ ಅಟವರನ್ನು ನಾನು ಆ್ಯರೋನ್ ಫಿಂಚ್ ಜೊತೆ ಆರಂಭಿಕನಾಗಿ ಆಯ್ಕೆ ಮಾಡಿಕೊಳ್ಳಲು ಬಯಸುತ್ತೇನೆ. ಪಾರ್ಥೀವ್ ಕೂಡ ಉತ್ತಮ ಆಯ್ಕೆ, ಆದರೆ ಪಡಿಕ್ಕಲ್ ಅವರನ್ನು ನಾನು ಈ ಬಾರಿ ನೋಡಲು ಇಷ್ಟಪಡುತ್ತೇನೆ. ಅವರಿಗೆ ಅವಕಾಶ ಮಾಡಿಕೊಡಲು ಎಬಿ ಡಿ ವಿಲಿಯರ್ಸ್ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನ ನಿರ್ವಹಿಸಬೇಕು ಎಂದು ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.
ಆ್ಯರೋನ್ ಫಿಂಚ್ರವನ್ನು ಖರೀದಿಸಿರುವುದರಿಂದ ಅವರನ್ನು ಆರಂಭಿಕನಾಗಿ ಆಡಿಸಲೇ ಬೇಕು. ಇನ್ನು ದೇವದತ್ ಪಡಿಕ್ಕಲ್ ಅವರಿಗೆ ಉತ್ತಮ ಜೊತೆಗಾರ. ಕೊಹ್ಲಿ 3ರಲ್ಲಿ ಹಾಗೂ ವಿಲಿಯರ್ಸ್ ವಿಕೆಟ್ ಕೀಪಿಂಗ್ ಜೊತೆಗೆ 4 ನೇ ಕ್ರಮಾಂಕದಲ್ಲಿ ಆಡಬೇಕು. 5ನೇ ಕ್ರಮಾಂಕದಲ್ಲಿ ಮೊಯಿನ್ ಅಲಿ ಮತ್ತು 6ನೇ ಕ್ರಮಾಂಕದಲ್ಲಿ ಶಿವಂ ದುಬೆ ಆಡುವುದರಿಂದ ಆರ್ಸಿಬಿ ಬ್ಯಾಟಿಂಗ್ ಬಲಿಷ್ಠವಾಗಲಿದೆ ಎಂದು ಚೋಪ್ರಾ ವಿವಿರಿಸಿದ್ದಾರೆ.
ಈಗಾಗಲೆ ಅರ್ಸಿಬಿ ಹೆಡ್ಕೋಚ್ ಸೈಮನ್ ಕ್ಯಾಟಿಚ್ ಕೂಡ ದೇವದತ್ ಪಡಿಕ್ಕಲ್ಗೆ ಅವಕಾಶ ನೀಡುವ ಬರವಸೆ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪೂರಕವೆಂಬಂತೆ ಎಬಿಡಿ ಕೂಡ ಕೆಲವು ಸೆಷನ್ನಲ್ಲಿ ವಿಕೆಟ್ ಕೀಪಿಂಗ್ ಅಭ್ಯಾಸ ನಡೆಸಿದ್ದಾರೆ.