ನವದೆಹಲಿ: ಜಗತ್ತಿನ ಶ್ರೀಮಂತ ಕ್ರಿಕೆಟ್ ಲೀಗ್ ಆಗಿರುವ 13ನೇ ಆವೃತ್ತಿಯ ಐಪಿಎಲ್ ಟೂರ್ನಾಮೆಂಟ್ ಅನ್ನು ಯುಎಇ ಅಥವಾ ಶ್ರೀಲಂಕಾದಲ್ಲಿ ಆಯೋಜಿಸುವ ಸಾಧ್ಯತೆಯಿದೆ.
ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್-ನವೆಂಬರ್ನಲ್ಲಿ ಆಯೋಜನೆಯಾಗಿರುವ 2020ರ ಟಿ20 ವಿಶ್ವಕಪ್ ಬಗ್ಗೆ ಐಸಿಸಿಯ ಅಂತಿಮ ನಿರ್ಧಾರಕ್ಕಾಗಿ ಬಿಸಿಸಿಐ ಕಾಯುತ್ತಿದ್ದು, ನಂತರ ಐಪಿಎಲ್ ಆಯೋಜನೆಯ ಅಧಿಕೃತ ನಿರ್ಧಾರವನ್ನು ಪ್ರಕಟಿಸಲಿದೆ.
ಐಎಎನ್‌ಎಸ್‌ನೊಂದಿಗೆ ಮಾತನಾಡಿದ ಬಿಸಿಸಿಐ ಅಧಿಕಾರಿಯೊಬ್ಬರು, ಐಪಿಎಲ್ಅನ್ನು ನಮ್ಮ ದೇಶದಲ್ಲಿ ನಡೆಸುವ ಆಲೋಚನೆಯಿದ್ದರೂ, ಕೊರೊನಾ ವೈರಸ್ ಸಾಂಕ್ರಾಮಿಕದಿಂದ ಪರಿಸ್ಥಿತಿ ಸರಿಯಿಲ್ಲ. ಹಾಗಾಗಿ ಅಂತಿಮವಾಗಿ ಟೂರ್ನಾಮೆಂಟ್ಅನ್ನು ಯುಎಇ ಅಥವಾ ಶ್ರೀಲಂಕಾದಲ್ಲಿ ನಡೆಸಬೇಕಾದ ಅನಿವಾರ್ಯತೆ ಬಂದೊದಗಿದೆ ಎಂದು ತಿಳಿಸಿದ್ದಾರೆ.
"ನಾವು ಇನ್ನು ಸ್ಥಳವನ್ನು ನಿರ್ಧರಿಸಿಲ್ಲ, ಆದರೆ ವಿದೇಶದಲ್ಲಿ ಟೂರ್ನಿ ಆಯೋಜಿಸುವ ಸಂಭವನೀಯತೆಗಳು ಹೆಚ್ಚಿವೆ. ಒಂದು ಅಥವಾ ಎರಡು ಸ್ಥಳಗಳಲ್ಲಿ ಎಲ್ಲಾ ತಂಡಗಳು ಸೇರಲು ಭಾರತದಲ್ಲಿ ಪರಿಸ್ಥಿತಿ ಸೂಕ್ತವೆನಿಸುತ್ತಿಲ್ಲ. ಮುಚ್ಚಿದ ಕ್ರೀಡಾಂಗಣದಲ್ಲಿ ನಡೆಸಬಹುದಾದರೂ ಆಟಗಾರರಿಗೆ ಹಾಗೂ ಸಿಬ್ಬಂದಿಗೆ ಸುರಕ್ಷಿತ ವಾತಾವಾರಣ ಕಲ್ಪಿಸಬೇಕಾದದ್ದು ನಮ್ಮ ಜವಾಬ್ದಾರಿಯಾಗಿದೆ.
ಟೂರ್ನಿ ಆಯೋಜಿಸಲು ಶ್ರೀಲಂಕಾ-ಯುಎಇ ನಡುವೆ ಸ್ಪರ್ಧೆ ಇದೆ. ಆದರೆ ಅಲ್ಲಿ ಕೊರೊನಾ ಸಾಂಕ್ರಾಮಿಕಕ್ಕೆ ಸಂಬಂಧಿಸಿದಂತೆ ಅಲ್ಲಿನ ಪರಿಸ್ಥಿತಿಗೆ ಅನುಗುಣವಾಗಿ ನಾವು ಲೀಗ್ ಎಲ್ಲಿ ನಡೆಸಬೇಕು ಎಂಬುದನ್ನು ನಿರ್ಧರಿಬೇಕಿದೆ. ಶೀಘ್ರದಲ್ಲೇ ಈ ಬಗ್ಗೆ ತಿಳಿಸಲಿದ್ದೇವೆ'' ಎಂದಿದ್ದಾರೆ.