ನವದೆಹಲಿ: 13ನೇ ಆವೃತ್ತಿ ಐಪಿಎಲ್ ಟೂರ್ನಿಗೆ ಕೇವಲ 44 ದಿನಗಳಿರುವಾಗ ಬಿಸಿಸಿಐ ಟೂರ್ನಮೆಂಟ್ ಶೀರ್ಷಿಕೆ ಹಕ್ಕಿನ ಪ್ರಾಯೋಜಕತ್ವ ಹೊಂದಿದ್ದ ವಿವೋ ಮೊಬೈಲ್ ಕಂಪನಿಯೊಂದಿಗಿನ ಒಪ್ಪಂದವನ್ನು ರದ್ದುಗೊಳಿಸಿರುವುದಾಗಿ ಅಧಿಕೃತ ಪ್ರಕಟಣೆ ಹೊರಡಿಸಿದೆ.
ಭಾನುವಾರ ನಡೆದಿದ್ದ ಐಪಿಎಲ್ ಆಡಳಿತ ಮಂಡಳಿಯ ಸಭೆಯಲ್ಲಿ ಚೀನಾ ಕಂಪನಿ ಪ್ರಾಯೋಜಕತ್ವವನ್ನು ಉಳಿಸಿಕೊಂಡು ಹೋಗುವುದಕ್ಕೆ ನಿರ್ಧರಿಸಿತ್ತು. ಆದರೆ ಈ ನಿರ್ಧಾರಕ್ಕೆ ಇನ್ನಿಲ್ಲದ ವಿರೋಧ ವ್ಯಕ್ತವಾದ ಕಾರಣ ಈ ನಿರ್ಧಾರ ಕೈಗೊಂಡಿದೆ.
ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತು ವಿವೋ ಮೊಬೈಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನಡುವಿನ 2020ರ ಐಪಿಎಲ್ ಒಪ್ಪಂದವನ್ನು ರದ್ದುಗೊಳಿಸಿಲಾಗಿದೆ ಎಂದು ಪ್ರಕಟಣೆ ಮೂಲಕ ತಿಳಿಸಿದೆ.
ಸಾಮಾಜಿಕ ಜಾಲತಾಣದಲ್ಲಿ ಐಪಿಎಲ್ ವಿರುದ್ದ ಕೂಗು ಕೇಳಿ ಬಂದ ಬೆನ್ನಲ್ಲೇ ಬಿಸಿಸಿಐ ಈ ನಿರ್ಧಾರ ತೆಗೆದುಕೊಂಡಿದೆ. ಅಭಿಮಾನಿಗಳ ಭಾವನೆ ಕ್ರಿಕೆಟ್ ಮಂಡಳಿಗೆ ಮೊದಲ ಆದ್ಯತೆಯಾಗಿರುವುದರಿಂದ ಚೀನಾ ಕಂಪನಿಯ ಜೊತೆಗಿನ ಒಪ್ಪಂದವನ್ನು ರದ್ದುಗೊಳಿಸಿರುವುದು ರಾಷ್ಟ್ರೀಯ ಹಿತಾಸಕ್ತಿ ಎಂದು ಬಿಸಿಸಿಐ ಅಭಿಪ್ರಾಯಪಟ್ಟಿದೆ.
ಇನ್ನು ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವ ಪಡೆದಿದ್ದ ಚೀನಾ ಮೂಲದ ವಿವೋ ಮೊಬೈಲ್ ಕಂಪನಿ ಬಿಸಿಸಿಐನೊಂದಿಗೆ 5 ವರ್ಷಗಳಿಗೆ 2,199 ಕೋಟಿ ರೂಗಳ ಒಪ್ಪಂದ ಮಾಡಿಕೊಂಡಿತ್ತು. ಈಗಾಗಲೇ ಎರಡು ವರ್ಷಗಳ ಒಪ್ಪಂದ ಮುಗಿದಿದೆ. ಬಿಸಿಸಿಐ ಮತ್ತು ವಿವೋ ನಡುವೆ ಇನ್ನು 1,320 ಕೋಟಿ ರೂಗಳ ಒಪ್ಪಂದವಿದೆ. 2021ರಿಂದ 2023ರ ಆವೃತ್ತಿಗೆ ವಿವೋ ಐಪಿಎಲ್ಗೆ ಮರಳುವ ಸಾಧ್ಯತೆ ಇದೆ ಎನ್ನಲಾಗಿದೆ.