ಅಹಮದಾಬಾದ್: ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲಿ ವೈಫಲ್ಯ ಅನುಭವಿಸಿದ ಟೀಂ ಇಂಡಿಯಾ ಮೊದಲ ಟಿ-20 ಪಂದ್ಯದಲ್ಲಿ ಸೋಲು ಕಂಡಿದ್ದು, ಇಂಗ್ಲೆಂಡ್ ತಂಡ 8 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಐದು ಟಿ-20 ಪಂದ್ಯಗಳ ಸರಣಿಯಲ್ಲಿ ಆಂಗ್ಲರ ತಂಡ 1-0 ಅಂತರದ ಮುನ್ನಡೆ ಪಡೆದುಕೊಂಡಿದೆ.
ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ ಪ್ಲೇಯರ್ಸ್ ಆಂಗ್ಲರ ಬೌಲಿಂಗ್ ದಾಳಿಗೆ ತತ್ತರಿಸಿ ಹೋದರು. ರೋಹಿತ್ ಅನುಪಸ್ಥಿತಿಯಲ್ಲಿ ಇನ್ನಿಂಗ್ಸ್ ಆರಂಭಿಸಿದ ಶಿಖರ್ ಧವನ್ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ.
ಆರಂಭಿಕರಾಗಿ ಕಣಕ್ಕಿಳಿದ ಶಿಖರ್ ಧವನ್(4), ಕೆ.ಎಲ್.ರಾಹುಲ್ (1) ಹಾಗೂ ವಿರಾಟ್ ಕೊಹ್ಲಿ ಸೊನ್ನೆ ಸುತ್ತಿ ನಿರಾಸೆ ಮೂಡಿಸಿದರು. 5 ಓವರ್ ಮುಕ್ತಾಯಗೊಳ್ಳುವಷ್ಟರಲ್ಲಿ ಟೀಂ ಇಂಡಿಯಾ ಆರಂಭಿಕ ಮೂರು ವಿಕೆಟ್ ಕಳೆದುಕೊಂಡು ಆಘಾತಕ್ಕೊಳಗಾಯಿತು. ಮಧ್ಯಮ ಕ್ರಮಾಂಕದಲ್ಲಿ ಒಂದಾದ ರಿಷಭ್ ಪಂತ್ ಹಾಗೂ ಶ್ರೇಯಸ್ ಐಯ್ಯರ್ ತಂಡಕ್ಕೆ ಆಸರೆಯಾದರು. ರಿಷತ್ ಪಂತ್(21), ಹಾರ್ದಿಕ್ ಪಾಂಡ್ಯ ಕೂಡ 19 ರನ್ ಗಳಿಸಿ ಔಟಾದರು. ಶ್ರೇಯಸ್ ಐಯ್ಯರ್ 67 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ಕೊನೆಯದಾಗಿ ತಂಡ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 124 ರನ್ ಗಳಿಸಲಷ್ಟೇ ಶಕ್ತವಾಯಿತು.
ಇಂಗ್ಲೆಂಡ್ ಪರ ಬೌಲಿಂಗ್ನಲ್ಲಿ ಮಿಂಚಿದ ಜೋಪ್ರಾ ಆರ್ಚರ್ 3 ವಿಕೆಟ್ ಪಡೆದುಕೊಂಡರೆ, ಬೆನ್ ಸ್ಟೋಕ್ಸ್, ಆದಿಲ್ ರಶೀದ್, ಮಾರ್ಕ್ ವುಡ್ ಹಾಗೂ ಜೋರ್ಡನ್ ತಲಾ 1 ವಿಕೆಟ್ ಪಡೆದುಕೊಂಡರು.
ಇದನ್ನೂ ಓದಿ: ಬ್ಯಾಟಿಂಗ್ ವೈಫಲ್ಯದ ನಡುವೆ ಅಬ್ಬರಿಸಿದ ಶ್ರೇಯಸ್: ಇಂಗ್ಲೆಂಡ್ ಗೆಲುವಿಗೆ 125 ರನ್ ಟಾರ್ಗೆಟ್
125 ರನ್ ಗೆಲುವಿನ ಗುರಿ ಬೆನ್ನತ್ತಿದ್ದ ಆಂಗ್ಲರ ಪಡೆ ಆರಂಭದಿಂದಲೂ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿತು. ಆರಂಭಿಕರಾಗಿ ಕಣಕ್ಕಿಳಿದ ಜೇಸನ್ ರಾಯ್ ಹಾಗೂ ಜೋಸ್ ಬಟ್ಲರ್ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ಮೊದಲ ವಿಕೆಟ್ಗೆ 72 ರನ್ಗಳ ಜೊತೆಯಾಟ ಆಡಿದ ಜೋಡಿ ತಂಡವನ್ನ ಗೆಲುವಿನತ್ತ ತೆಗೆದುಕೊಂಡು ಹೋಯಿತು.
ಜೇಸನ್ ರಾಯ್ 49 ರನ್, ಬಟ್ಲರ್ 28 ರನ್ ಗಳಿಕೆ ಮಾಡಿ ವಿಕೆಟ್ ಒಪ್ಪಿಸುತ್ತಿದ್ದಂತೆ ನಂತರ ಬಂದ ಡೇವಿಡ್ ಮಲಾನ್ ಅಜೇಯ 24 ರನ್ ಹಾಗೂ ಬೈರ್ಸ್ಟೋ ಅಜೇಯ 26 ರನ್ ಗಳಿಕೆ ಮಾಡಿ ತಂಡವನ್ನ ಗೆಲುವಿನ ದಡ ಸೇರಿಸಿದರು. ಕೊನೆಯದಾಗಿ ತಂಡ 15.3 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 130 ರನ್ಗಳಿಸಿ ಜಯ ಸಾಧಿಸಿತು.
ಟೀಂ ಇಂಡಿಯಾ ಪರ ಯಜುವೇಂದ್ರ ಚಹಾಲ್ ಹಾಗೂ ವಾಷಿಂಗ್ಟನ್ ಸುಂದರ್ ತಲಾ 1 ವಿಕೆಟ್ ಪಡೆದುಕೊಂಡರು.