ಗುವಾಹಟಿ: ಗಾಯದಿಂದ ಚೇತರಿಸಿಕೊಂಡಿರುವ ಶಿಖರ್ ಧವನ್ ಜೊತೆ ಕೆಎಲ್ ರಾಹುಲ್ ಶ್ರೀಲಂಕಾ ವಿರುದ್ಧದ ಟಿ-20 ಪಂದ್ಯದಲ್ಲಿ ಇನ್ನಿಂಗ್ಸ್ ಆರಂಭಿಸಲಿದ್ದಾರೆ ಎಂದು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಖಚಿತಪಡಿಸಿದ್ದಾರೆ.
"ರಾಹುಲ್ ತನಗೆ ಸಿಕ್ಕ ಅವಕಾಶಗಳನ್ನು ತುಂಬಾ ಚೆನ್ನಾಗಿ ಉಪಯೋಗಿಸಿಕೊಂಡಿದ್ದಾರೆ. ಯಾವುದೇ ಒಬ್ಬ ಆಟಗಾರ ಗಾಯಕ್ಕೊಳಗಾದರೆ, ಸಿಗುವ ಅವಕಾಶಗಳನ್ನು ಮತ್ತೊಬ್ಬ ಎರಡೂ ಕೈಗಳಿಂದ ಬಾಚಿಕೊಳ್ಳುವುದು ಕ್ರೀಡೆಗಳಲ್ಲಿ ಸಾಮಾನ್ಯ. ರಾಹುಲ್ ಕೂಡ ತಮ್ಮ ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಂಡು ಉತ್ತಮವಾಗಿ ಆಡುತ್ತಿದ್ದಾರೆ. ಅವರು ಚೆಂಡನ್ನು ದಂಡಿಸುವುದನ್ನು ನೋಡುವುದಕ್ಕೆ ಖುಷಿಯಾಗುತ್ತದೆ" ಎಂದು ಕೊಹ್ಲಿ ತಿಳಿಸಿದ್ದಾರೆ.
ಆದರೆ, ತಂಡದಲ್ಲಿ 15 ಮಂದಿ ಆಟಗಾರರು ಎಲ್ಲ ಪಂದ್ಯಗಳಲ್ಲೂ ಆಡುವುದಕ್ಕಾಗುವುದಿಲ್ಲ ಎಂಬುದು ಎಲ್ಲರಿಗೂ ತಿಳಿದಿದೆ. ರೋಹಿತ್ ಅನುಪಸ್ಥಿತಿಯಲ್ಲಿ ರಾಹುಲ್ -ಶಿಖರ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಆದರೆ ರೋಹಿತ್ ತಂಡಕ್ಕೆ ವಾಪಸ್ ಬಂದರೆ ಯಾರನ್ನು ಆಯ್ಕೆ ಮಾಡಬೇಕು ಎಂಬುದೇ ನಮಗೆ ಕಷ್ಟವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಟಿ20 ಸರಣಿಗೆ ರೋಹಿತ್ ಶರ್ಮಾರಿಗೆ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ ವಿಂಡೀಸ್ ವಿರುದ್ಧ ಸರಣಿ ತಪ್ಪಿಸಿಕೊಂಡಿದ್ದ ಧವನ್ಗೆ ತಮ್ಮ ಸಾಮರ್ಥ್ಯ ಸಾಬೀತುಪಡಿಸಿಲು ಮತ್ತೊಂದು ಅವಕಾಶ ಸಿಕ್ಕಿದೆ.
ಇನ್ನು ಟಿ-20 ವಿಶ್ವಕಪ್ ಬಗ್ಗೆ ಮಾತನಾಡಿದ ಕೊಹ್ಲಿ , ಟಿ20 ಕ್ರಿಕೆಟ್ನಲ್ಲಿ ಆಟಗಾರರನ್ನು ಆಯ್ಕೆ ಮಾಡಲು ನಮಗೆ ಯಾವುದೇ ಸಮಸ್ಯೆಯಿಲ್ಲ. ಯಾಕಂದ್ರೆ ವಿಶ್ವಕಪ್ಗೂ ಮುನ್ನ ಐಪಿಎಲ್ ಬರುವುದರಿಂದ ಯಾವ ಆಟಗಾರರು, ಯಾವ ರೀತಿ ಪ್ರದರ್ಶನ ನೀಡಲಿದ್ದಾರೆ ಎಂಬುದು ತಿಳಿಯುತ್ತದೆ. ಅಲ್ಲದೆ, ಆಟಗಾರರು ಯಾವ ರೀತಿ ಫಿಟ್ ಇರುತ್ತಾರೆ ಎಂಬುದರ ಮೇಲೆ ತಂಡದ ಆಯ್ಕೆ ನಿಂತಿದೆ. ಈ ದೃಷ್ಠಿಯಿಂದ ಮುಂದಿನ ನಾಲ್ಕೈದು ಸರಣಿಗಳು ನಮಗೆ ಮುಖ್ಯವಾಗಿದೆ. ಅಲ್ಲಿ ಆಟಗಾರರು ಯಾವ ರೀತಿ ಒತ್ತಡ ನಿಭಾಯಿಸಲಿದ್ದಾರೆ ಎಂಬುದು ತಿಳಿಯಲಿದೆ. ಅಲ್ಲದೆ ಐಸಿಸಿ ಟೂರ್ನಮೆಂಟ್ಗಳನ್ನು ಕೇವಲ 2-3 ಆಟಗಾರರಿಂದ ಗೆಲ್ಲಲು ಸಾಧ್ಯವಿಲ್ಲ, ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದು ಅವರು ತಿಳಿಸಿದ್ದಾರೆ.
ಜನವರಿ 5 ರಿಂದ ಶ್ರೀಲಂಕಾ ವಿರುದ್ಧ ಟಿ-20 ಸರಣಿ ನಡೆಯಲಿದೆ.