ಲಖನೌ(ಉತ್ತರಪ್ರದೇಶ): ನಾಳೆಯಿಂದ ಭಾರತ ಮತ್ತು ದಕ್ಷಿಣ ಆಫ್ರಿಕಾದ ಮಹಿಳಾ ಕ್ರಿಕೆಟ್ ಏಕದಿನ ಸರಣಿ ಆರಂಭವಾಗುತ್ತಿದ್ದು, ಭಾರತದ ಮಹಿಳಾ ಕ್ರಿಕೆಟ್ ತಂಡ ಭರ್ಜರಿ ಅಭ್ಯಾಸ ಆರಂಭಿಸಿದೆ.
ನಾಳಿನ ಪಂದ್ಯದ ಬಗ್ಗೆ ಮಾತನಾಡಿರುವ ಏಕದಿನ ತಂಡದ ಉಪನಾಯಕಿ ಹರ್ಮನ್‌ಪ್ರೀತ್ ಕೌರ್, ದಕ್ಷಿಣ ಆಫ್ರಿಕಾದ ವಿರುದ್ಧ ಈ ಸರಣಿಯಲ್ಲಿ ನಾವು ಸಾಕಷ್ಟು ಸವಾಲುಗಳನ್ನು ಎದುರಿಸಲಿದ್ದೇವೆ. ಏಕೆಂದರೆ ದಕ್ಷಿಣ ಆಫ್ರಿಕಾ ತಂಡ ಪಾಕಿಸ್ತಾನ ತಂಡವನ್ನು ತವರು ನೆಲದಲ್ಲಿಯೇ ಕ್ಲೀನ್ ಸ್ವೀಪ್ ಮಾಡಿದೆ. ಹಾಗಾಗಿ ನಾವು ಕಠಿಣ ಅಭ್ಯಾಸ ನಡೆಸುವ ಅನಿವಾರ್ಯತೆಯಿದೆ. ನಮ್ಮ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಐದು ಏಕದಿನ ಮತ್ತು ಮೂರು ಟಿ 20 ಪಂದ್ಯಗಳನ್ನು ಆಡಲು ಸಂಪೂರ್ಣ ಉತ್ಸಾಹದಲ್ಲಿದೆ ಎಂದು ಕೌರ್ ಹೇಳಿದ್ದಾರೆ.
ಕಳೆದ ಎರಡು ವರ್ಷಗಳಲ್ಲಿ ದಕ್ಷಿಣ ಆಫ್ರಿಕಾ ಮಹಿಳಾ ಕ್ರಿಕೆಟ್ ತಂಡವು ಉತ್ತಮ ಕ್ರಿಕೆಟ್ ಆಡಿದೆ ಎಂದು ಒಪ್ಪಿಕೊಂಡರೂ ಕೌರ್, ದಕ್ಷಿಣ ಆಫ್ರಿಕಾ ತಂಡವನ್ನು ಲಘುವಾಗಿ ಪರಿಗಣಿಸುವುದಿಲ್ಲ ಎಂದಿದ್ದಾರೆ.
ನಾಳಿನ ಪಂದ್ಯ ಹರ್ಮನ್‌ಪ್ರೀತ್ ಕೌರ್ಗೆ 100 ನೇ ಏಕದಿನ ಪಂದ್ಯವಾಗಿದ್ದು, ತವರು ನೆಲದಲ್ಲಿ ನೂರನೇ ಪಂದ್ಯ ಆಡುತ್ತಿರುವುದಕ್ಕೆ ಉತ್ಸುಕಳಾಗಿದ್ದೇನೆ ಎಂದಿದ್ದಾರೆ.
ಓದಿ : 35 ಎಸೆತಗಳಲ್ಲಿ 80ರನ್ ಚಚ್ಚಿದ ಸೆಹ್ವಾಗ್: ಬಾಂಗ್ಲಾ ವಿರುದ್ಧ ಇಂಡಿಯಾ ಲೆಜೆಂಡ್ಸ್ಗೆ ಜಯ
ನ್ಯೂಜಿಲೆಂಡ್‌ನಲ್ಲಿ ನಡೆಯಲಿರುವ ವಿಶ್ವಕಪ್‌ಗಾಗಿ ಈ ಸರಣಿಯಿಂದ ಉತ್ತಮ ಆರಂಭ ಮಾಡುವ ವಿಶ್ವಾಸವಿದೆ. ಆದರೆ, ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಕಳೆದ ವರ್ಷದ ಮಾರ್ಚ್‌ನಿಂದ ಒಂದೇ ಒಂದು ಪಂದ್ಯವನ್ನೂ ಆಡಿಲ್ಲ. ಅದೇನೇ ಇದ್ದರೂ, ಮುಂದಿನ ವರ್ಷದ ಏಪ್ರಿಲ್‌ನಲ್ಲಿ ನ್ಯೂಜಿಲೆಂಡ್‌ನಲ್ಲಿ ನಡೆಯಲಿರುವ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ತಂಡದಲ್ಲಿ ಅದ್ಭುತ ಪ್ರದರ್ಶನ ನೀಡಲಿದೆ ಎಂದು ಹರ್ಮನ್‌ಪ್ರೀತ್ ಕೌರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.