ಚೆನ್ನೈ: ವೆಸ್ಟ್ ಇಂಡೀಸ್ ವಿರುದ್ಧ ಚೆನ್ನೈ ಚಿಂದರಬರಂ ಮೈದಾನದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಹೀನಾಯ ಸೋಲು ಕಂಡಿದ್ದು, ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ 1-0 ಹಿನ್ನಡೆ ಅನುಭವಿಸಿದೆ.
ಟೀಂ ಇಂಡಿಯಾ ನೀಡಿದ್ದ 287 ರನ್ಗಳ ಗುರಿ ಬೆನ್ನತ್ತಿದ್ದ ವೆಸ್ಟ್ ಇಂಡೀಸ್ 47.5 ಓವರ್ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು 291 ರನ್ ಗಳಿಸುವ ಮೂಲಕ ಗೆಲುವಿನ ನಗೆ ಬೀರಿದೆ. ಇದೇ ಪಂದ್ಯದಲ್ಲಿ ಸ್ಪಿನ್ನರ್ಸ್ಗಳಿಂದ ಕಳಪೆ ರೆಕಾರ್ಡ್ವೊಂದು ದಾಖಲಾಗಿದೆ.
ಉಭಯ ತಂಡದ ಸ್ಪಿನ್ನರ್ಸ್ ಮೊದಲ ಏಕದಿನ ಪಂದ್ಯದಲ್ಲಿ ಬರೋಬ್ಬರಿ 33 ಓವರ್ (198 ಎಸೆತ) ಮಾಡಿದ್ದು, ಒಂದೇ ಒಂದು ವಿಕೆಟ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿಲ್ಲ. ವೆಸ್ಟ್ ಇಂಡೀಸ್ನ ಬೌಲರ್ಗಳಾದ ರೋಸ್ಟನ್ ಚೇಸ್ ಮತ್ತು ಹೇಡನ್ ವಾಲ್ಸ್ 11 ಓವರ್ ಹಾಗೂ ಟೀಂ ಇಂಡಿಯಾದ ಕುಲ್ದೀಪ್ ಯಾದವ್, ರವೀಂದ್ರ ಜಡೇಜಾ ಹಾಗೂ ಕೇದಾರ್ ಜಾಧವ್ ಸೇರಿ 21 ಓವರ್ ಎಸೆದಿದ್ದಾರೆ. ಈ ಎಲ್ಲ ಬೌಲರ್ಗಳು ವಿಕೆಟ್ ಪಡೆದುಕೊಳ್ಳುವಲ್ಲಿ ವಿಫಲಗೊಂಡಿದ್ದಾರೆ.
ಇಲ್ಲಿಯವರೆಗೆ ಟೀಂ ಇಂಡಿಯಾದಲ್ಲಿ ಮೂಡಿ ಬಂದಿರುವ ಕಳಪೆ ಪ್ರದರ್ಶನ ಇದಾಗಿದ್ದು, ಈ ಹಿಂದೆ 2001ರಲ್ಲಿ ಭಾರತ-ಆಸ್ಟ್ರೇಲಿಯಾ ನಡುವೆ ನಡೆದಿದ್ದ ಪಂದ್ಯದಲ್ಲಿ ಸ್ಪಿನ್ನರ್ಗಳು 175 ಎಸೆತ ಮಾಡಿ ಯಾವುದೇ ವಿಕೆಟ್ ಪಡೆದುಕೊಂಡಿರಲಿಲ್ಲ. ನಿನ್ನೆಯ ಪಂದ್ಯದಲ್ಲಿ ಟೀಂ ಇಂಡಿಯಾದ ದೀಪಕ್ ಚಹರ್ ಹಾಗೂ ಮೊಹಮ್ಮದ್ ಶಮಿ ಮಾತ್ರ ವಿಕೆಟ್ ಕಿತ್ತಿದ್ದಾರೆ.