ರಾಂಚಿ: ಶುಕ್ರವಾರದಿಂದ ರಾಂಚಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಅಂತಿಮ ಟೆಸ್ಟ್ ಪಂದ್ಯ ನಡೆಯಲಿದ್ದು, ಭಾರತ ತಂಡದ ನಾಯಕ ಕೊಹ್ಲಿ ಇನ್ನೊಂದು ಶತಕ ದಾಖಲಿಸಿದರೆ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಗ್ ದಾಖಲೆ ಮುರಿಯಲಿದ್ದಾರೆ.
ಈಗಾಗಲೆ ವಿರಾಟ್ ಕೊಹ್ಲಿ ನಾಯಕನಾಗಿ ಟೆಸ್ಟ್ ಕ್ರಿಕೆಟ್ನಲ್ಲಿ 19 ಶತಕ ಸಿಡಿಸಿ ರಿಕಿ ಪಾಂಟಿಂಗ್(19)ರೊಂದಿಗೆ ಮೊದಲ ಸ್ಥಾನ ಹಂಚಿಕೊಂಡಿದ್ದಾರೆ. ಇನ್ನೊಂದು ಶತಕ ಸಿಡಿಸಿದರೆ ಕೊಹ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ ನಾಯಕನಾಗಿ ಹೆಚ್ಚು ಶತಕ ಸಿಡಿಸಿದ ವಿಶ್ವದ ಎರಡನೇ ಬ್ಯಾಟ್ಸ್ಮನ್ ಎನಿಸಿಕೊಳ್ಳಲಿದ್ದಾರೆ.
ದಕ್ಷಿಣ ಆಫ್ರಿಕಾದ ಗ್ರೇಮ್ ಸ್ಮಿತ್ ನಾಯಕನಾಗಿ 25 ಶತಕ ಸಿಡಿಸಿ ಮೊದಲ ಸ್ಥಾನದಲ್ಲಿದ್ದಾರೆ. ಇವರನ್ನು ಬಿಟ್ಟರೆ ಆಸ್ಟ್ರೇಲಿಯಾದ ಸ್ಟಿವ್ ಸ್ಮಿತ್ ಹಾಗೂ ಅಲೆನ್ ಬಾರ್ಡರ್ ತಲಾ 15 ಶತಕ ಸಿಡಿಸಿದ್ದು ಮೂರನೇ ಸ್ಥಾನದಲ್ಲಿದ್ದರೆ, ಟೆಸ್ಟ್ ಕ್ರಿಕೆಟ್ ಲೆಜೆಂಡ್ ಡಾನ್ ಬ್ರಾಡ್ಮನ್ 14 ಶತಕ ಸಿಡಿಸಿದ್ದಾರೆ.
ಈಗಾಗಲೆ ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ ಆಫ್ರಿಕನ್ನರ ವಿರುದ್ಧ 3 ಪಂದ್ಯಗಳ ಟೆಸ್ಟ್ ಸರಣಿಯನ್ನು 2-0ಯಲ್ಲಿ ಗೆದ್ದುಕೊಂಡಿದೆ. ಮೊದಲ ಟೆಸ್ಟ್ ಪಂದ್ಯವನ್ನು 203 ರನ್ಗಳಿಂದ ಗೆದ್ದರೆ, ಎರಡನೇ ಟೆಸ್ಟ್ ಪಂದ್ಯವನ್ನು ಇನ್ನಿಂಗ್ಸ್ ಹಾಗೂ 137 ರಿಂದ ಗೆಲುವು ಸಾಧಿಸಿ ಸರಣಿಯನ್ನು 2-0ಯಲ್ಲಿ ಮುನ್ನಡೆ ಸಾಧಿಸಿತ್ತು.