ಲಕ್ನೋ: ಅಫ್ಘಾನಿಸ್ತಾನದ ವಿರುದ್ಧದ 5 ಪಂದ್ಯಗಳ ಏಕದಿನ ಸರಣಿಯಲ್ಲಿ 4ನೇ ಪಂದ್ಯವನ್ನು ಗೆಲ್ಲುವ ಮೂಲಕ ಅಂಡರ್ 19 ಕಿರಿಯರ ತಂಡ ಇನ್ನೊಂದು ಪಂದ್ಯವಿರುವಂತೆಯೇ ಸರಣಿಯನ್ನು 3-1 ರಲ್ಲಿ ವಶಪಡಿಸಿಕೊಂಡಿದೆ.
ಕನ್ನಡಿಗ ಶುಭಾಂಗ್ ಹೆಗ್ಡೆ ನೇತೃತ್ವದ ಭಾರತ ತಂಡ ಟಾಸ್ ಗೆದ್ದು, ಅಫ್ಘಾನಿಸ್ತಾನ ತಂಡವನ್ನು ಬ್ಯಾಟಿಂಗ್ ಅಹ್ವಾನಿಸಿ ಕೇವಲ 35 ಓವರ್ಗಳಲ್ಲಿ 113 ರನ್ಗಳಿಗೆ ಆಲೌಟ್ ಮಾಡಿತು.
ಅಫ್ಘಾನಿಸ್ತಾನ ಪರ ಆರಂಭಿಕರಾದ ಇಮ್ರಾನ್ 44 ಹಾಗೂ ಫರ್ಹಾನ್ ಝಾಕಿಲ್ 23, ರಹ್ಮನುಲ್ಲಾ 15 ರನ್ ಗಳಿಸಿದ್ದು ಬಿಟ್ಟರೆ ಉಳಿದ ಬ್ಯಾಟ್ಸ್ಮನ್ಗಳು ಎರಡಂಕಿ ಮೊತ್ತವನ್ನು ಗಳಿಸಲು ವಿಫಲರಾದರು. ರಾಯಚೂರಿನ ವಿದ್ಯಾದರ ಪಾಟೀಲ 2 ವಿಕೆಟ್, ಶುಭಾಂಗ್ ಹೆಗ್ಡೆ 2 ವಿಕೆಟ್, ಮನವ್ ಸುತಾರ್ 5 ವಿಕೆಟ್ ಪಡೆದು ಮಿಂಚಿದರು.
114 ರನ್ಗಳ ಸುಲಭ ಗುರಿ ಬೆನ್ನತ್ತಿದ ಭಾರತ ತಂಡ 28.1 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಅಲ್ಲದೆ ಇನ್ನೊಂದು ಪಂದ್ಯವಿರುವಂತೆಯೇ ಸರಣಿಯನ್ನು ವಶಪಡಿಸಿಕೊಂಡಿತು.
ಭಾರತದ ಪರ ಕುಮಾರ್ ಕುಶಾಗ್ರ 29, ದಿವ್ಯಾನ್ಶ್ ಸಕ್ಸೇನ 21, ಸೌರವ್ ಡ್ಯಾಗರ್ 24 ರನ್ ಗಳಿಸಿ ತಂಡಕ್ಕೆ ಜಯ ತಂದುಕೊಟ್ಟರು.
ಔಪಾಚಾರಿಕವಾಗಿರುವ ಕೊನೆಯ ಪಂದ್ಯ ಶನಿವಾರ ಇದೇ ಲಕ್ನೋದಲ್ಲಿ ನಡೆಯಲಿದೆ.