ಹ್ಯಾಮಿಲ್ಟನ್( ನ್ಯೂಜಿಲ್ಯಾಂಡ್): ಸೂಪರ್ ಓವರ್ ನಲ್ಲಿ ರೋಹಿತ್ ಶರ್ಮಾ ಅಬ್ಬರದ ಬ್ಯಾಟಿಂಗ್ನಿಂದ ಕಿವೀಸ್ ಗೆಲುವಿನ ಕನಸು ಕಮರಿ ಹೋಗಿದೆ. ಈ ಪಂದ್ಯವನ್ನು ಗೆಲ್ಲುವ ಮೂಲಕ ಟೀಮ್ ಇಂಡಿಯಾ 5 ಪಂದ್ಯಗಳ ಸರಣಿಯಲ್ಲಿ 3-0 ಮುನ್ನಡೆ ಸಾಧಿಸಿ, ಸರಣಿ ಕೈವಶ ಮಾಡಿಕೊಂಡಿದೆ. ಈ ಮೂಲಕ ನ್ಯೂಜಿಲ್ಯಾಂಡ್ ನೆಲದಲ್ಲಿ ವಿಶೇಷ ಸಾಧನೆ ಮಾಡಿದೆ.
ಪಂದ್ಯ ಟೈ ಆಗಿದ್ದರಿಂದ ಸೂಪರ್ ಓವರ್ ಆಡಿಸಲಾಯಿತು. ಸೂಪರ್ ಓವರ್ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕಿವೀಸ್ ಪಡೆ, ಒಂದು ಓವರ್ನಲ್ಲಿ 18 ರನ್ಗಳಿಸಿ ಉತ್ತಮ ಟಾರ್ಗೆಟ್ ಅನ್ನೇ ನೀಡಿತು. ಮೊದಲು ಸೂಪರ್ ಓವರ್ನಲ್ಲಿ ಬ್ಯಾಟ್ ಬೀಸಿದ ವಿಲಿಯಮ್ಸ್ನ್ 17 ರನ್ಗಳಿಸಿ ಮಿಂಚಿದರು. ಈ ಟಾರ್ಗೆಟ್ ಬೆನ್ನಟ್ಟಿದ ಟೀಮ್ ಇಂಡಿಯಾ ಮೊದಲ ನಾಲ್ಕು ಬಾಲ್ಗಳಲ್ಲಿ ಕೇವಲ 8 ರನ್ಗಳಿಸಿತು. ಇನ್ನೇನು ಸೋಲು ಖಚಿತ ಎಂಬಂತೆ ಭಾರತೀಯ ಪ್ರೇಕ್ಷಕರು ಬೇಜಾರಿನಲ್ಲಿರುವಾಗಲೇ ಕೊನೆಯ ಎರಡು ಎಸೆತಗಳಲ್ಲಿ ಅದ್ಭುತ ಎರಡು ಸಿಕ್ಸರ್ ಸಿಡಿಸಿ ಹಿಟ್ ಮ್ಯಾನ್ ರೋಹಿತ್ ಶರ್ಮಾ ನ್ಯೂಜಿಲ್ಯಾಂಡ್ ಪಡೆಯಿಂದ ಗೆಲುವನ್ನು ಕಸಿದುಕೊಂಡರು. ಈ ಮೂಲಕ ಭಾರತಕ್ಕೆ ಸರಣಿ ಗೆಲುವಿನ ಉಡುಗೊರೆಯನ್ನೂ ನೀಡಿದರು.
ಟೀಮ್ ಇಂಡಿಯಾ ನೀಡಿದ 179 ರನ್ಗಳ ಟಾರ್ಗೆಟ್ ಬೆನ್ನಟ್ಟಿದ ಕಿವೀಸ್ ಉತ್ತಮ ಆರಂಭ ಪಡೆಯಿತು. ನ್ಯೂಜಿಲ್ಯಾಂಡ್ ಪರ ಓಪನರ್ ಆಗಿ ಕ್ರೀಸ್ಗಿಳಿದ ಗುಪ್ಟಿಲ್ ಮತ್ತು ಕಾಲಿನ್ ಮನ್ರೊ ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟರು.
ಬಿರುಸಿನ ಆಟವಾಡಿದ ಗಪ್ಟಿಲ್ ಕೇವಲ 21 ಎಸೆತಗಳಲ್ಲಿ 31 ರನ್ಗಳಿಸಿ ಶಾರ್ದುಲ್ ಠಾಕೂರ್ ಗೆ ವಿಕೆಟ್ ಒಪ್ಪಿಸಿದರು. ಇವರ ಈ ಇನ್ನಿಂಗ್ಸ್ನಲ್ಲಿ 2 ಬೌಂಡರಿ ಮತ್ತು ಮೂರು ಅದ್ಭುತ ಸಿಕ್ಸರ್ಗಳಿದ್ದವು. ಆದರೆ, ಕಳೆದ ಎರಡು ಪಂದ್ಯಗಳಲ್ಲಿ ಮಿಂಚಿದ್ದ ಮನ್ರೋ ಕೇವಲ 14 ರನ್ಗಳಿಸಿ ಔಟಾದರು. ನಂತರ ಕ್ರೀಸ್ಗಿಳಿದ ಕಿವೀಸ್ ನಾಯಕ ಮಿಂಚಿನ ಆಟವಾಡಿ ತಂಡವನ್ನು ಗೆಲುವಿನ ಹತ್ತಿರ ತೆಗೆದುಕೊಂಡು ಹೊದರಾದ್ರೂ, ಪಂದ್ಯ ಡ್ರಾ ಮಾಡಲಷ್ಟೇ ಸಾಧ್ಯವಾಯಿತು. ಇದರಿಂದಾಗಿ ಪಂದ್ಯ ಸೂಪರ್ ಓವರ್ಗೆ ಹೋಯಿತು.