ಚೆನ್ನೈ: ಭಾರತ ತಂಡದ ಮುಂಬರುವ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ನಾಯಕ ಜೋ ರೂಟ್ರನ್ನು ಕಟ್ಟಿ ಹಾಕಲು ಎದುರು ನೋಡುತ್ತಿದೆ. ರೂಟ್ 2021ರಲ್ಲಿ ಅತ್ಯುತ್ತಮ ಆರಂಭ ಪಡೆದಿದ್ದಾರೆ. ಅಲ್ಲದೆ ಭಾರತದ ಸ್ಪಿನ್ ಶಕ್ತಿಯ ಮುಂದೆ ಧೈರ್ಯವಾಗಿ ಆಡಬಲ್ಲ ಏಕೈಕ ಆಂಗ್ಲ ಬ್ಯಾಟ್ಸ್ಮನ್ ಆಗಿದ್ದಾರೆ. ಆದರೆ, ಇಂಗ್ಲೆಂಡ್‌ಗೆ ಕೊಹ್ಲಿ ಚಿಂತೆ ಜೊತೆಗೆ ಭಾರತದ ಇನ್ನಿತರೆ ಬ್ಯಾಟ್ಸ್ಮನ್ಗಳ ಕಡೆಗೆ ಗಮನ ಹರಿಸುವುದು ಅನಿವಾರ್ಯ.
ಜೋ ರೂಟ್ ಈಗಾಗಲೇ ಸ್ಪಿನ್ ಪ್ರಾಬಲ್ಯವಿರುವ ಶ್ರೀಲಂಕಾದಲ್ಲಿ ಅತಿಥೇಯ ಬೌಲಿಂಗ್ ಪಡೆಯ ವಿರುದ್ಧ ಜಯ ಸಾಧಿಸಿದ್ದಾರೆ. ಅವರು 2 ಪಂದ್ಯಗಳಲ್ಲಿ ಒಂದು ದ್ವಿಶತಕ ಮತ್ತು ಒಂದು ಶತಕದ ಸಹಿತ ಬರೋಬ್ಬರಿ 426 ರನ್ಗಳಿಸಿದ್ದಾರೆ.
ಇನ್ನು, ಇಂಡಿಯನ್ ಕ್ಯಾಪ್ಟನ್ ಏನೂ ಕಮ್ಮಿಯಲ್ಲ ಎಂಬಂತಿವೆ ದಾಖಲೆಗಳು. ಅವರು 2018ರಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದ ವೇಳೆ 59.3ರ ಸರಾಸರಿಯಲ್ಲಿ 593 ರನ್ಗಳಿಸಿದ್ದರೆ, 2016ರ ತವರಿನ ಸರಣಿಯಲ್ಲಿ 109ರ ಸರಾಸರಿಯಲ್ಲಿ ಬರೋಬ್ಬರಿ 655ರನ್ ಗಳಿಸಿದ್ದರು. ಈ ಸರಣಿ ಇಬ್ಬರ ನಡುವಿನ ಕಾದಾಟಕ್ಕೆ ಸಾಕ್ಷಿಯಾಗಲಿದೆ.
"ಇಂಗ್ಲೆಂಡ್ ಬ್ಯಾಟಿಂಗ್ ಕೋಚ್ ಗ್ರಹಾಂ ಥ್ರೋಪ್ ಅವರ ಪ್ರಕಾರ, ಇಂಗ್ಲೆಂಡ್ ತಂಡ ಕೇವಲ ಕೊಹ್ಲಿಯನ್ನು ಮಾತ್ರ ಎದುರು ನೋಡುತ್ತಿಲ್ಲ. ಕೊಹ್ಲಿಯಷ್ಟೇ ಗುಣಮಟ್ಟವುಳ್ಳ ಹಲವಾರು ಬ್ಯಾಟ್ಸ್ಮನ್ಗಳು ತಂಡದಲ್ಲಿದ್ದಾರೆ. ಅದರಲ್ಲಿ ಅವರು ತವರಿನ ಪರಿಸ್ಥಿತಿಯ ಬಗ್ಗೆ ಚೆನ್ನಾಗಿ ಅರಿತಿದ್ದಾರೆ. ಹಾಗಾಗಿ, ಇಂಗ್ಲೆಂಡ್ ಬೌಲರ್ಗಳು ತಮ್ಮ ಕೈಲಾದಷ್ಟು ಅತ್ಯುತ್ತಮ ಬೌಲಿಂಗ್ ಮಾಡಲು ಎದುರು ನೋಡುತ್ತಿದ್ದಾರೆ" ಎಂದು ತಿಳಿಸಿದ್ದಾರೆ.
ಇನ್ನು, ತಮ್ಮ ತಂಡದ ನಾಯಕ ರೂಟ್ ಅವರನ್ನು ತಂಡವನ್ನ ಮುಂದೆ ನಿಂತು ನಡೆಸಬಲ್ಲ ನಾಯಕನಿಗೆ ಉದಾಹರಣೆ ಎಂದಿದ್ದಾರೆ.
'ಚೆನ್ನೈ ಟೆಸ್ಟ್ ಪಂದ್ಯ ರೂಟ್ಗೆ 100ನೇ ಟೆಸ್ಟ್ ಪಂದ್ಯವಾಗಲಿದೆ. ಶ್ರೀಲಂಕಾ ವಿರುದ್ದ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿ ತಮ್ಮ ಜೊತೆಯಲ್ಲಿರುವ ಆಟಗಾರರಿಗೆ ಮಾದರಿಯಾಗಿದ್ದಾರೆ. ಅವರ ಕೆಲಸ ನೀತಿ ಅದ್ಭುತವಾಗಿದೆ. ಅವರು ಸದಾ ಆಟದ ಮೇಲಿನ ಪ್ರೀತಿಯನ್ನು ಸಹ ಉಳಿಸಿಕೊಂಡಿರುತ್ತಾರೆ' ಎಂದು ಇಂಗ್ಲೆಂಡ್ ಪರ 100 ಟೆಸ್ಟ್ ಪಂದ್ಯಗಳಲ್ಲಿ 6744ರನ್ಗಳಿಸಿರುವ ಥ್ರೋಪ್ ತಿಳಿಸಿದ್ದಾರೆ.
ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ 87 ಪಂದ್ಯಗಳಲ್ಲಿ 7318 ರನ್ ಗಳಿಸಿದ್ದಾರೆ. ಅವರು 27 ಶತಕ 23 ಅರ್ಧಶತಕ ಸಿಡಿಸಿದ್ದಾರೆ. ಇನ್ನು, ಇಂಗ್ಲಿಷ್ ನಾಯಕ ರೂಟ್ 99 ಟೆಸ್ಟ್ ಪಂದ್ಯಗಳಿಂದ 8249 ರನ್ಗಳಿಸಿದ್ದಾರೆ. ಅವರು 19 ಶತಕ ಮತ್ತು 49 ಅರ್ಧಶತಕ ಸಿಡಿಸಿದ್ದಾರೆ.
ಇದನ್ನು ಓದಿ:ಭಾರತ vs ಇಂಗ್ಲೆಂಡ್: 122 ಟೆಸ್ಟ್ಗಳ ಮುಖಾಮುಖಿಯಲ್ಲಿ ಟಾಪ್ 5 ಗರಿಷ್ಠ ಸ್ಕೋರರ್ ಇವರೇ ನೋಡಿ