ಸಿಡ್ನಿ: ಭಾರತ ತಂಡದ ಸ್ಟಾರ್ ಬ್ಯಾಟ್ಸ್ಮನ್ ಚೇತೇಶ್ವರ್ ಪೂಜಾರರಿಗೆ ರನ್ ಗಳಿಸದಂತೆ ನಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಕಠಿಣವಾಗಿ ಬೌಲಿಂಗ್ ಮಾಡಲು ಬಯಸಿದ್ದೇವೆ ಎಂದು ಆಸ್ಟ್ರೇಲಿಯಾದ ನಂಬರ್ ಒನ್ ಬೌಲರ್ ಪ್ಯಾಟ್ ಕಮ್ಮಿನ್ಸ್ ಹೇಳಿದ್ದಾರೆ.
ಪೂಜಾರ 3ನೇ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ 176 ಎಸೆತಗಳಲ್ಲಿ ಕೇವಲ 50 ರನ್ ಸಿಡಿಸಿ ಟೀಕೆಗೆ ಗುರಿಯಾಗಿದ್ದಾರೆ. ಕಳೆದ ಬಾರಿ 3 ಶತಕಗಳ ಸಹಿತ 521 ರನ್ ಸಿಡಿಸಿ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದ ಅವರು ಈ ಬಾರಿ ಹೇಳಿಕೊಳ್ಳುವ ಪ್ರದರ್ಶನ ತೋರುತ್ತಿಲ್ಲ. ಪೂಜಾರ ಈ ಟೆಸ್ಟ್ ಸರಣಿಯಲ್ಲಿ 5 ಇನ್ನಿಂಗ್ಸ್ಗಳಲ್ಲಿ 4 ಬಾರಿ ಕಮ್ಮಿನ್ಸ್ಗೆ ವಿಕೆಟ್ ಒಪ್ಪಿಸಿದ್ದಾರೆ.
ಈ ಸರಣಿಯಲ್ಲಿ ಪೂಜಾರ ಅವರನ್ನು ನಮ್ಮ ತಲೆಯಲ್ಲಿಟ್ಟುಕೊಂಡಿದ್ದೇವೆ. ಅವರು ರನ್ ಗಳಿಸಲು ಸಾಧ್ಯವಾದಷ್ಟು ಕಷ್ಟವಾಗಿಸಲು ನಾವು ಮಾಡುತ್ತಿದ್ದೇವೆ. ಅವರು 200ರಿಂದ 300 ಎಸೆತಗಳನ್ನು ಎದುರಿಸಲಿ. ಆದರೆ ನಾವು ಉತ್ತಮವಾದ ಎಸೆತಗಳನ್ನು ಎಸೆಯಬೇಕು. ಆ ಉತ್ತಮ ಎಸೆತಗಳು ಅವರಿಗೆ ಬ್ಯಾಟಿಂಗ್ ಮಾಡಲು ಸವಾಲಾಗಿರಬೇಕು ಎಂದುಕೊಂಡಿದ್ದೆವು. ಅದೃಷ್ಟವಶಾತ್ ನಮ್ಮ ಯೋಜನೆ ಫಲಿಸಿತು ಎಂದು ಪೂಜಾರ ವಿಕೆಟ್ ಪಡೆದ ವಿಶ್ವದ ನಂಬರ್ ಒನ್ ಬೌಲರ್ ಕಮ್ಮಿನ್ಸ್ ಪಂದ್ಯದ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 338 ರನ್ ಗಳಿಸಿದರೆ, ಇದಕ್ಕೆ ಉತ್ತರವಾಗಿ ಭಾರತ 244 ರನ್ ಗಳಿಸಿತು. ಪ್ಯಾಟ್ ಕಮ್ಮಿನ್ಸ್ 29 ರನ್ ನೀಡಿ 4 ವಿಕೆಟ್ ಪಡೆದರು.
ಇದನ್ನು ಓದಿ: ಆಸೀಸ್ ದಾಳಿಯ ಮುಂದೆ ಇದಕ್ಕಿಂತ ಉತ್ತಮವಾಗಿ ಇನ್ನೇನೂ ಮಾಡಲಾರೆ: ಪೂಜಾರ