ದುಬೈ: ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಪಿಂಕ್ ಬಾಲ್ ಟೆಸ್ಟ್ ಪಂದ್ಯಕ್ಕಾಗಿ ಟೀಂ ಇಂಡಿಯಾ ಆಟಗಾರರು ಇಂದಿನಿಂದ ತರಬೇತಿ ಆರಂಭಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ದುಬೈನಲ್ಲಿನ ಐಸಿಸಿ ಅಕಾಡೆಮಿಯಲ್ಲಿ ಟೀಂ ಇಂಡಿಯಾ ಆಟಗಾರರು ತರಬೇತಿ ನಡೆಸಲಿದ್ದಾರೆ. ಈಗಾಗಲೇ ಚೇತೇಶ್ವರ ಪೂಜಾರ ಮತ್ತು ಹನುಮ ವಿಹಾರಿ ಸೇರಿ ಕೆಲವರು ಅಕಾಡೆಮಿಯಲ್ಲಿ ತರಬೇತಿ ನಡೆಸುತ್ತಿದ್ದಾರೆ. ಆದರೆ, ಇಂದಿನಿಂದ ರಾತ್ರಿ ವೇಳೆಯೂ ತರಬೇತಿ ನಡೆಸಲಿದ್ದಾರೆ ಎಂದು ಟೀಂ ಇಂಡಿಯಾ ಮ್ಯಾನೇಜ್ಮೆಂಟ್ನ ಮೂಲಗಳು ತಿಳಿಸಿವೆ.
ಆಸೀಸ್ ವಿರುದ್ಧದ ಸರಣಿಗೆ ಕಠಿಣ ಅಭ್ಯಾಸ ನಡೆಸಲಾಗುತ್ತಿದೆ. ಸರಣಿ ತಯಾರಿ ಅಗತ್ಯವನ್ನು ತಂಡವು ಅರಿತುಕೊಂಡಿದ್ದು, ದುಬೈನಲ್ಲಿ ನಮ್ಮ ಸಮಯ ನ್ಯಾಯಯುತವಾಗಿ ಬಳಸಲು ಬಯಸುತ್ತೇವೆ. ಇಂದಿನಿಂದ ಪಿಂಕ್ ಬಾಲ್ನಲ್ಲಿ ತರಬೇತಿ ಆರಂಬಿಸಲಿದ್ದು, ಸುಮಾರು ಮೂರು ಗಂಟೆಗಳ ಕಾಲ ಆಟಗಾರರು ತರಬೇತಿ ಪಡೆಯಲಿದ್ದಾರೆ" ಎಂದು ಮೂಲಗಳು ತಿಳಿಸಿವೆ.
ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ ಡಿಸೆಂಬರ್ 17 ರಿಂದ ಅಡಿಲೇಡ್‌ನಲ್ಲಿ ನಡೆಯುವ ಅಹರ್ನಿಶಿ ಪಂದ್ಯದ ಮೂಲಕ ಬಾರ್ಡರ್ - ಗವಾಸ್ಕರ್ ಟೆಸ್ಟ್ ಸರಣಿ ಪ್ರಾರಂಭಿಸಲಿದೆ. ಅಡಿಲೇಡ್ ಪಂದ್ಯವು ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ಮೊದಲ ಅಹರ್ನಿಶಿ ಟೆಸ್ಟ್ ಪಂದ್ಯವಾಗಲಿದೆ.
ಈ ಹಿಂದೆ ಎರಡೂ ತಂಡಗಳು ಅಹರ್ನಿಶಿ ಟೆಸ್ಟ್ ಪಂದ್ಯದಲ್ಲಿ ಸೋತಿಲ್ಲ. ಆಸ್ಟ್ರೇಲಿಯಾ ತಂಡವು ಅಡಿಲೇಡ್‌ನಲ್ಲಿ ನ್ಯೂಜಿಲ್ಯಾಂಡ್, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ಮತ್ತು ಪಾಕಿಸ್ತಾನ ವಿರುದ್ಧದ ನಾಲ್ಕು ಪಿಂಕ್ ಬಾಲ್ ಟೆಸ್ಟ್ ಪಂದ್ಯಗಳನ್ನು ಆಡಿದ್ದು, ನಾಲ್ಕರಲ್ಲೂ ಗೆಲುವು ಸಾಧಿಸಿದೆ. ಇತ್ತ ಟೀಂ ಇಂಡಿಯಾ 2019 ರಲ್ಲಿ ಬಾಂಗ್ಲಾದೇಶ ವಿರುದ್ಧದ ಈಡನ್ ಗಾರ್ಡನ್‌ನಲ್ಲಿ ನಡೆದ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಜಯ ಸಾಧಿಸಿತ್ತು.