ದುಬೈ: ಸಿಡ್ನಿಯಲ್ಲಿ ಭಾರತ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಮೂರನೇ ದಿನದಂದು ಅಂಪೈರ್ ನಿರ್ಧಾರದಲ್ಲಿ ಭಿನ್ನಾಭಿಪ್ರಾಯ ತೋರಿಸಿದ್ದಕ್ಕಾಗಿ ಆಸ್ಟ್ರೇಲಿಯಾ ನಾಯಕ ಟಿಮ್ ಪೇನ್ ಅವರಿಗೆ ಪಂದ್ಯದ ಶುಲ್ಕದ ಶೇಕಡಾ 15 ರಷ್ಟು ದಂಡ ವಿಧಿಸಲಾಗಿದೆ.
ಪೇನ್ "ಆಟಗಾರರು ಮತ್ತು ಆಟಗಾರರ ಬೆಂಬಲ ಸಿಬ್ಬಂದಿಯ ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.8" ಅನ್ನು ಉಲ್ಲಂಘಿಸಿರುವುದು ಕಂಡು ಬಂದಿದೆ.
"ಇದರ ಜೊತೆಗೆ, ಪೇನ್ ಅವರ ಶಿಸ್ತಿನ ದಾಖಲೆಯಲ್ಲಿ ಒಂದು ಡಿಮೆರಿಟ್ ಪಾಯಿಂಟ್ ಅನ್ನು ಸೇರಿಸಲಾಗಿದೆ, ಇದು 24 ತಿಂಗಳ ಅವಧಿಯಲ್ಲಿ ಮಾಡಿದ ಮೊದಲ ಅಪರಾಧವಾಗಿದೆ" ಎಂದು ಐಸಿಸಿ ಹೇಳಿಕೆಯಲ್ಲಿ ತಿಳಿಸಿದೆ.
ಚೇತೇಶ್ವರ ಪೂಜಾರ ವಿರುದ್ಧ ಡಿಆರ್‌ಎಸ್ ವಿಫಲವಾದ ನಂತರ ಅಂಪೈರ್ ನಿರ್ಧಾರವನ್ನು ಪೇನ್ ಟೀಕಿಸಿದ್ದರು. ವೇಡ್ ಹಿಡಿದ ಕ್ಯಾಚ್ಗೆ ಚೇತೇಶ್ವರ್ ಪೂಜಾರ ಔಟ್ ಆಗಿದ್ದಾರೆ ಎಂದು ಆಸೀಸ್ ಆಟಗಾರರು ಬಲವಾದ ಮನವಿ ಮಾಡಿದ್ರು. ಆದ್ರೆ ಆನ್-ಫೀಲ್ಡ್ ಅಂಪೈರ್ ಮನವಿಯನ್ನು ತಿರಸ್ಕರಿಸಿದ್ರು.
ಆತಿಥೇಯರು ಈ ನಿರ್ಧಾರವನ್ನು ಪರಿಶೀಲಿಸಲು ನಿರ್ಧರಿಸಿದರು. ಮೂರನೇ ಅಂಪೈರ್ ಬ್ರೂಸ್ ಆಕ್ಸೆನ್‌ಫೋರ್ಡ್, ಯಾವುದೇ ನಿರ್ಣಾಯಕ ಪುರಾವೆಗಳು ಸಿಗದ ಕಾರಣ ಅಂಪೈರ್ಸ್ ಕಾಲ್ನಿಂದಾಗಿ ನಾಟ್ಔಟ್ ಎಂದು ಘೋಷಿಸಿದ್ರು. ಈ ವೇಳೆ ಪೇನ್ ತಾಳ್ಮೆ ಕಳೆದುಕೊಂಡು ಆನ್ -ಫೀಲ್ಡ್ ಅಂಪೈರ್ ವಿಲ್ಸನ್ ಜೊತೆ ವಾದಕ್ಕಿಳಿದರು. ಮೂರನೇ ಅಂಪೈರ್ ಕೇವಲ ಲೆಗ್ - ಸೈಡ್ ನೋಡುವುದಕ್ಕಿಂತ ಹೆಚ್ಚಾಗಿ ಆಫ್-ಸೈಡ್ ಹಾಟ್ ಸ್ಪಾಟ್ ಅನ್ನು ಪರೀಕ್ಷಿಸುವ ಅಗತ್ಯವಿದೆ ಎಂದು ಪೇನ್ ಹೇಳಿರುವುದು ಸ್ಟಂಪ್ ಮೈಕ್ನಲ್ಲಿ ರೆಕಾರ್ಡ್ ಆಗಿತ್ತು.
ಪೇನ್ ತಮ್ಮ ಅಪರಾಧವನ್ನು ಒಪ್ಪಿಕೊಂಡಿದ್ದು, ಐಸಿಸಿ ಎಲೈಟ್ ಪ್ಯಾನಲ್ ಆಫ್ ಮ್ಯಾಚ್ ರೆಫರಿ ಡೇವಿಡ್ ಬೂನ್ ಪ್ರಸ್ತಾಪಿಸಿದ ಅನುಮೋದನೆ ಸಮ್ಮತಿ ಸೂಚಿಸಿದ್ದಾರೆ. ಹಂತ 1 ಉಲ್ಲಂಘನೆಯು ಅಧಿಕೃತ ಖಂಡನೆಯ ಜೊತೆ ಆಟಗಾರನ ಪಂದ್ಯ ಶುಲ್ಕದ ಗರಿಷ್ಠ 50 ರಷ್ಟು ದಂಡ ಮತ್ತು ಒಂದು ಅಥವಾ ಎರಡು ಡಿಮೆರಿಟ್ ಪಾಯಿಂಟ್‌ಗಳನ್ನು ಹೊಂದಿರುತ್ತದೆ.