ಹೈದರಾಬಾದ್: ಕೋವಿಡ್-19 ಸಾಂಕ್ರಾಮಿಕ ರೋಗವು ದುಬೈನ ಐಸಿಸಿ ಕೇಂದ್ರ ಕಚೇರಿ ತಲುಪಿದ್ದು, ಕೆಲವು ಸಿಬ್ಬಂದಿ ಸೋಂಕಿಗೆ ತುತ್ತಾಗಿದ್ದಾರೆ ಎಂದು ತಿಳಿದುಬಂದಿದೆ.
ಕಟ್ಟುನಿಟ್ಟಾದ ಆರೋಗ್ಯ ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಅನುಸರಿಸುವ ಸಲುವಾಗಿ, ಐಸಿಸಿ ಕೇಂದ್ರ ಕಚೇರಿ ಕೆಲವು ದಿನಗಳವರೆಗೆ ಮುಚ್ಚಲ್ಪಡುತ್ತದೆ ಮತ್ತು ಸಿಬ್ಬಂದಿ ಮನೆಯಿಂದಲೇ ಕೆಲಸ ಮಾಡುವ ಸಾಧ್ಯತೆಯಿದೆ. ಏಕೆಂದರೆ ಕಾರ್ಯಾಚರಣೆಯನ್ನು ಪುನಾರಂಭಿಸಲು ಇಡೀ ಆವರಣವನ್ನು ಸ್ವಚ್ಛಗೊಳಿಸಲಾಗುತ್ತದೆ.
ಆದಾಗ್ಯೂ, ದುಬೈನಲ್ಲಿರುವ ಎಲ್ಲಾ ಆರು ಐಪಿಎಲ್ ತಂಡಗಳಿಗೆ ಒಳ್ಳೆಯ ಸುದ್ದಿ ಏನೆಂದರೆ ಐಸಿಸಿ ಅಕಾಡೆಮಿ ಮೈದಾನವು ತರಬೇತಿಗೆ ಸುರಕ್ಷಿತವಾಗಿದೆ. ಐಸಿಸಿ ಪ್ರಧಾನ ಕಚೇರಿಯಿಂದ ಮೈದಾನ ಸ್ವಲ್ಪ ದೂರದಲ್ಲಿರುವುದರಿಂದ ಯಾವುದೇ ತೊಂದರೆ ಇಲ್ಲವೆಂದು ಹೇಳಲಾಗಿದೆ.
ಈ ಬಗ್ಗೆ ಐಸಿಸಿಯಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಂದಿಲ್ಲ, ಆದರೆ ಮಂಡಳಿಯ ಹಿರಿಯ ಸದಸ್ಯರೊಬ್ಬರು ಕೆಲವರಿಗೆ ಸೋಂಕು ತಗುಲಿರುವುದನ್ನು ದೃಢಪಡಿಸಿದ್ದಾರೆ.
ಸೋಂಕಿತ ಸಿಬ್ಬಂದಿ ಸ್ಥಳೀಯ ನಿಯಮಗಳ ಪ್ರಕಾರ ಕ್ವಾರಂಟೈನ್ಗೆ ಒಳಗಾಗಿದ್ದು, ಅವರೊಂದಿಗೆ ಸಂಪರ್ಕಕ್ಕೆ ಬಂದವರನ್ನೂ ಕ್ವಾರಂಟೈನ್ಗೆ ಒಳಪಡಿಸಲಾಗುತ್ತಿದೆ ಎಂದು ವರದಿ ಮಾಡಲಾಗಿದೆ.