ನವದೆಹಲಿ : ಭಾರತದಲ್ಲಿ ನಡೆಯಬೇಕಿರುವ ಐಸಿಸಿ ಟಿ20 ವಿಶ್ವಕಪ್ಗೆ ಬೋರ್ಡ್ ಬ್ಯಾಕ್ಅಪ್ ಯೋಜನೆಗಳನ್ನು ಹೊಂದಿದೆ. ಆದರೆ, ಪ್ರಸ್ತುತ ಕೋವಿಡ್-19 ಪ್ರಕರಣಗಳು ಹೆಚ್ಚಾಗಿದ್ದರೂ ವಿಶ್ವಕಪ್ನ ಭಾರತದಿಂದ ಹೊರಗೆ ಆಯೋಜಿಸುವ ಯಾವುದೇ ಆಲೋಚನೆಗಳನ್ನು ಹೊಂದಿಲ್ಲ ಎಂದು ಐಸಿಸಿ ಹಂಗಾಮಿ ಸಿಇಒ ಜೆಫ್ ಅಲಾರ್ಡಿಸ್ ಬುಧವಾರ ಹೇಳಿದ್ದಾರೆ.
ಟೂರ್ನಮೆಂಟ್ ಅಕ್ಟೋಬರ್-ನವೆಂಬರ್ನಲ್ಲಿ ಭಾರತದಲ್ಲಿ ಆಯೋಜನೆಗೊಂಡಿದೆ. ಆದರೆ, ಕಳೆದ ಒಂದು ವಾರದಿಂದ ಭಾರತದಲ್ಲಿ ಪ್ರತಿದಿನ ಲಕ್ಷಕ್ಕೂ ಹೆಚ್ಚು ಪ್ರಕರಣ ಕಂಡು ಬರುತ್ತಿವೆ. ಕೋವಿಡ್ ಮಧ್ಯೆಯೂ ಇದೇ ಶುಕ್ರವಾರದಿಂದ ಚೆನ್ನೈನಲ್ಲಿ ಐಪಿಎಲ್ ಆರಂಭವಾಗುತ್ತಿದೆ.
"ನಾವು ಖಂಡಿತವಾಗಿಯೂ ಯೋಜಿಸಿದಂತೆ ಈ ಇವೆಂಟ್ನೊಂದಿಗೆ ಮುಂದುವಿರಿಯುತ್ತಿದ್ದೇವೆ. ನಾವು ಪ್ಲಾನ್ ಬಿ ಹೊಂದಿದ್ದೇವೆ. ಆದರೆ, ನಾವು ಇನ್ನೂ ಆ ಯೋಜನೆಗಳನ್ನು ಸಕ್ರಿಯಗೊಳಿಸಿಲ್ಲ. ನಾವು ಬಿಸಿಸಿಐನೊಂದಿಗೆ ಕೆಲಸ ಮಾಡುತ್ತಿದ್ದೇವೆ. ಅಂತಹ ಸಮಯ ಬಂದರೆ ನಮ್ಮ ಬ್ಯಾಕ್ಅಪ್ ಪ್ಲಾನ್ಗಳನ್ನು ಸಕ್ರಿಯಗೊಳಿಸುತ್ತೇವೆ" ಎಂದು ಅಲಾರ್ಡಿಸ್ ವರ್ಚುವಲ್ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕಳೆದ ವರ್ಷ ಇದೇ ಕೋವಿಡ್-19 ಕಾರಣದಿಂದ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದ್ದ ಟಿ20 ವಿಶ್ವಕಪ್ 2022ಕ್ಕೆ ಮುಂದೂಡಲ್ಪಟ್ಟಿದೆ. ಇದೀಗ ಈ ವರ್ಷದ ವಿಶ್ವಕಪ್ ಕೂಡ ಕೋವಿಡ್ಗೆ ಬಲಿಯಾಗುವುದೇ ಅನ್ನೋ ಅನುಮಾನವೂ ಕಾಡತೊಡಗಿದೆ.
ಭಾರತದ ಮನು ಸಾಹ್ನಿ ಅವರಿಂದ ತೆರವಾದ ಸ್ಥಾನಕ್ಕೆ ಹಂಗಾಮಿ ಸಿಇಒ ಆಗಿ ಅಯ್ಕೆಯಾಗಿರುವ ಜನರಲ್ ಮ್ಯಾನೇಜರ್ ಅಲಾರ್ಡಿಸ್ ಕೋವಿಡ್-19 ಸಂದರ್ಭದಲ್ಲಿ ಇತರೆ ರಾಷ್ಟ್ರಗಳು ಹೇಗೆ ನಿಭಾಯಿಸುತ್ತಿವೆ ಅನ್ನೋದನ್ನು ತಿಳಿಯಲು ಕೆಲ ಬೋರ್ಡ್ಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರುವುದಾಗಿ ತಿಳಿಸಿದ್ದಾರೆ.
ಇದನ್ನು ಓದಿ: ಏಕದಿನ ರ‍್ಯಾಂಕಿಂಗ್: ನಾಲ್ಕು ವರ್ಷಗಳ ನಂತರ ಅಗ್ರಪಟ್ಟ ಕಳೆದುಕೊಳ್ಳುವ ಭೀತಿಯಲ್ಲಿ ಕೊಹ್ಲಿ