ನವದೆಹಲಿ: ಟೀಂ ಇಂಡಿಯಾ ಆಟಗಾರ ಅಜಿಂಕ್ಯಾ ರಹಾನೆ ಅವರನ್ನು "ಅಸಾಧಾರಣ ನಾಯಕ" ಎಂದು ಕಂಡುಕೊಂಡಾಡಿರುವ ಆಸ್ಟ್ರೇಲಿಯಾದ ಮಾಜಿ ನಾಯಕ ಇಯಾನ್ ಚಾಪೆಲ್, ಅವರ "ಆಕ್ರಮಣಕಾರಿ ಶೈಲಿ" ಭಾರತ ತಂಡಕ್ಕೆ ಸರಿ ಹೊಂದುತ್ತದೆ ಎಂದಿದ್ದಾರೆ.
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೊದಲ ಟೆಸ್ಟ್ ನಂತರ ತವರಿಗೆ ಮರಳಲಿದ್ದು, ಬಾರ್ಡರ್-ಗವಾಸ್ಕರ್ ಟ್ರೋಫಿಯ ಉಳಿದ ಮೂರು ಪಂದ್ಯಗಳಲ್ಲಿ ರಹಾನೆ ಟೀಂ ಇಂಡಿಯಾದ ನಾಯಕತ್ವ ವಹಿಸಲಿದ್ದಾರೆ.
2017ರಲ್ಲಿ ಆಸೀಸ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ರಹಾನೆ ನಾಯಕತ್ವ ನಿರ್ವಹಿಸಿದ್ದರು. ಅವರ ನಾಯಕತ್ವವು ಅಸಾಧಾರಣವಾಗಿದ್ದು, ಅವರು ನಿಜವಾಗಿಯೂ ಆಕ್ರಮಣಕಾರಿ ನಾಯಕ ಎಂದು ಚಾಪೆಲ್ ಹೇಳಿದ್ದಾರೆ.
ಆಸ್ಟ್ರೇಲಿಯಾದ ಮೊದಲ ಇನ್ನಿಂಗ್ಸ್‌ನಲ್ಲಿ ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದ ವಾರ್ನರ್ ಭಾರತೀಯ ಬೌಲರ್‌ಗಳ ಮೇಲೆ ಸವಾರಿ ಮಾಡುತ್ತಿದ್ದರು. ಅದರೆ ರಹಾನೆ, ಕುಲದೀಪ್ ಯಾದವ್ ಅವರನ್ನು ದಾಳಿಗಿಳಿಸಿ ವಾರ್ನರ್ ಅವರನ್ನು ಔಟ್ ಮಾಡಿದ್ರು.
"ನನಗೆ ನೆನಪಿರುವ ಎರಡನೇಯ ವಿಷಯವೆಂದರೆ, ಕಡಿಮೆ ಮೊತ್ತವನ್ನು ಬೆನ್ನಟ್ಟುತ್ತಿದ್ದ ಭಾರತ ತುಂಬಾ ಬೇಗ ಒಂದೆರಡು ವಿಕೆಟ್ ಕಳೆದುಕೊಂಡಿತು. ಬ್ಯಾಟಿಂಗ್ಗೆ ಆಗಮಿಸಿದ ರಹಾನೆ ಆಸ್ಟ್ರೇಲಿಯಾದ ಬೌಲರ್‌ಗಳ ಮೇಲೆ ದಾಳಿ ಮಾಡಿ, 27 ಎಸೆತಗಳಲ್ಲಿ 38 ರನ್ ಗಳಿಸಿದರು. ಅವರ ಈ ಆಕ್ರಮಣಕಾರಿ ಆಟ ನನಗೆ ಇಷ್ಟವಾಯಿತು" ಎಂದಿದ್ದಾರೆ.
ನಾಯಕನಾಗಿ ನಿಮಗೆ ಯಾವಾಗಲೂ ಎರಡು ಆಯ್ಕೆಗಳಿವೆ. ಒಂದು ಆಕ್ರಮಣಕಾರಿ ಮಾರ್ಗ, ಇನ್ನೊಂದು ಸಂಪ್ರದಾಯವಾದಿ ವಿಧಾನ. ಟೆಸ್ಟ್ ಕ್ರಿಕೆಟ್‌ನಲ್ಲಿ ಆಕ್ರಮಣಕಾರಿ ವಿಧಾನವು ಅತ್ಯಗತ್ಯ ಮತ್ತು ರಹಾನೆ ಆಕ್ರಮಣಕಾರಿ ಎಂದು ನಾನು ನಂಬಿದ್ದೇನೆ ಎಂದಿದ್ದಾರೆ.