ನವದೆಹಲಿ: ರಾಹುಲ್ ದ್ರಾವಿಡ್.... ಟೀಂ ಇಂಡಿಯಾದ ಮಹಾಗೋಡೆ. ಮಾಜಿ ನಾಯಕ, ವಿಕೆಟ್ ಕೀಪರ್, ಬೆಸ್ಟ್ ಫೀಲ್ಡರ್ ಹೀಗೆ... ಭಾರತ ತಂಡಕ್ಕೆ ಎಲ್ಲವೂ ಆಗಿದ್ದವರು. ಅವರು ಎಲ್ಲ ಮಾದರಿ ಕ್ರಿಕೆಟ್ನಿಂದ ನಿವೃತ್ತರಾಗಿ 7 ವರ್ಷಗಳೇ ಕಳೆದಿವೆ.
16 ವರ್ಷದ ತಮ್ಮ ಕ್ರಿಕೆಟ್ ವೃತ್ತಿ ಜೀವನದಲ್ಲಿ ಹಲವು ವಿಕ್ರಮಗಳನ್ನ ಬರೆದಿದ್ದಾರೆ. ಸಚಿನ್ - ಗಂಗೂಲಿ - ದ್ರಾವಿಡ್ ಭಾರತೀಯ ಕ್ರಿಕೆಟ್ನ ತ್ರೀಮೂರ್ತಿಗಳು ಅಂತಾನೇ ಫೇಮಸ್. ಇನ್ನು ಸಚಿನ್, ಗಂಗೂಲಿ, ವಿವಿಎಸ್ ಲಕ್ಷ್ಮಣ್ ಬಿಸಿಸಿಐನಲ್ಲಿ ಮಹತ್ವದ ಪಾತ್ರ ವಹಿಸ್ತಿದ್ದಾರೆ. ಕೋಚ್ಗಳ ಆಯ್ಕೆಯಲ್ಲಿ ಇವರದ್ದೇ ತೀರ್ಮಾನ.
ಆದರೆ, ರಾಹುಲ್ ದ್ರಾವಿಡ್ ನಿವೃತ್ತಿ ಬಳಿಕವೂ ಸದ್ದಿಲ್ಲದೇ ಬಿಸಿಸಿಐನಲ್ಲಿ ಸಕ್ರೀಯವಾಗಿದ್ದಾರೆ. ಭಾರತೀಯ ಸಿನೀಯರ್ ತಂಡದ ಕೋಚ್ ಆಫರ್ ತಿರಸ್ಕರಿಸಿ ಗುಪ್ತಗಾಮಿನಿಯಾಗಿ ಯುವ ಪಡೆಯನ್ನ ಕಟ್ಟುವುದರಲ್ಲಿ ನಿರತರಾಗಿದ್ದಾರೆ. ನಿಷ್ಪಕ್ಷಪಾತವಾಗಿ ಯುವ ಪ್ರತಿಭೆಗಳನ್ನ ಹುಡುಕಿ ಅವರ ಸಾಮರ್ಥ್ಯವನ್ನ ಒರೆಗೆ ಹಚ್ಚಿ, ಉತ್ತಮ ತರಬೇತಿ ನೀಡಿ ಭಾರತೀಯ ತಂಡಕ್ಕೆ ಕಳುಹಿಸಿಕೊಡ್ತಿದ್ದಾರೆ.
ಮಾಡಿದ ಸಾಧನೆ ಸಹ ಆಟಗಾರರ ಅಬ್ಬರದ ಮುಂದೆ ಸದಾ ಮಂಕು:
ದಿ ವಾಲ್ ತಾವು ಪ್ರವೇಶಿಸಿದ ಮೊದಲ ಟೆಸ್ಟ್ನಲ್ಲಿ 95 ರನ್ ಮಾಡಿ ಗಮನ ಸೆಳೆದಿದ್ದರು. ಆದರೆ, 1996ರ ಲಾರ್ಡ್ಸ್ ಮೈದಾನದಲ್ಲಿ ತಾವು ಪ್ರವೇಶ ಪಡೆದ ಮೊದಲ ಪಂದ್ಯದಲ್ಲಿ ಸೆಂಚುರಿ ಬಾರಿಸುವ ಮೂಲಕ ದ್ರಾವಿಡ್ ಸಾಧನೆ ಸುದ್ದಿಯೇ ಆಗಲಿಲ್ಲ. ಇದು ಮೊದಲ ಸಲವೇನೂ ಅಲ್ಲ. ಇದಾದ ಮೂರು ವರ್ಷಗಳ ಬಳಿಕ ಶ್ರೀ ಲಂಕಾ ವಿರುದ್ಧದ ವಿಶ್ವಕಪ್ ಮ್ಯಾಚ್ನಲ್ಲಿ ದಿ ವಾಲ್ 145 ರನ್ಗಳನ್ನ ಬಾರಿಸಿದ್ದರು. ಆದರೆ, ಅವರ ಸಾತಿ ಸೌರವ್ ಗಂಗೂಲಿ 183 ರನ್ಗಳ ಅಮೋಘ ಆಟವಾಡಿ ದ್ರಾವಿಡ್ ಆಟವನ್ನೇ ಮರೆಸಿ ಬಿಟ್ಟರು.
ಕೋಲ್ಕತ್ತಾ ಐತಿಹಾಸಿಕ ಟೆಸ್ಟ್ ಗೆಲುವಿನಲ್ಲಿಯೂ ಇದೆ ದ್ರಾವಿಡ್ ಸಿಂಹಪಾಲು:
ಇದಾದ ಕೆಲ ವರ್ಷಗಳಲ್ಲಿ ಮತ್ತೊಂದು ಇಂತಹದ್ದೇ ಘಟನೆ ನಡೆಯಿತು. 2001ರಲ್ಲಿ ನಡೆದ ಅತ್ಯಂತ ಮಹತ್ವದ ಕೋಲ್ಕತ್ತಾ ಟೆಸ್ಟ್ನಲ್ಲೂ ದ್ರಾವಿಡ್ 180 ರನ್ಗಳನ್ನ ಬಾರಿಸಿದ್ದರು. ಆದ್ರೆ ಇನ್ನೊಂದು ಬದಿಯಲ್ಲಿದ್ದ ವಿವಿಎಸ್ ಲಕ್ಷ್ಮಣ್ 281 ರನ್ಗಳನ್ನ ಬಾರಿಸಿ ವಿಶ್ವದಾಖಲೆಯ ಜಯಕ್ಕೆ ಕಾರಣವಾಗಿದ್ದರು. ಆಗಲೂ ದ್ರಾವಿಡ್ ಸಾಧನೆ ಲಕ್ಷ್ಮಣ್ ಅಬ್ಬರದಲ್ಲಿ ಮಂಕಾಗಿ ಹೋಗಿತ್ತು. ಹೀಗೆ... ಸಾಲು ಸಾಲು ಸಾಧನೆಗಳನ್ನ ಮಾಡಿದಾಗಲೂ ಬೇರೆಯವರು ದ್ರಾವಿಡ್ ರನ್ನ ಮೀರಿಸಿ ಬಿಡ್ತಿದ್ದರು. ದ್ರಾವಿಡ್ ನೆಲಕಚ್ಚಿ ನಿಂತರೆ ಮತ್ತೊಬ್ಬರು ಅವರ ಬೆವರನ್ನೇ ಬಳಸಿಕೊಂಡು ಸಾಧನೆಯ ಶಿಖರವೇರಿ ಬಿಡ್ತಿದ್ದರು.
24 ಸಾವಿರ ರನ್ಗಳ ಸರದಾರ:
ದ್ರಾವಿಡ್ ಹೆಸರಲ್ಲಿ 24 ಸಾವಿರ ರನ್ಗಳಿವೆ. ಹಲವು ಸಾಧನೆಗಳನ್ನ ಮಾಡಿದ ದ್ರಾವಿಡ್, ಸದ್ದಿಲ್ಲದೇ ಕ್ರಿಕೆಟ್ ಬದುಕಿಗೆ ವಿರಾಮ ಹಾಕಿದ್ದರು. ಆದ್ರೆ ಅವರು ಕ್ರಿಕೆಟ್ನಿಂದ ಯಾವತ್ತೂ ವಿರಾಮ ಹಾಕಿಲ್ಲ. ಈಗ ಭಾರತದ ಅಂಡರ್ -19 ಹಾಗೂ ಎ ಟೀಮ್ ಕೋಚ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಹಲವು ಪ್ರತಿಭಾನ್ವಿತರ ಅನ್ವೇಷಕ:
ಒಂದಲ್ಲ ಎರಡಲ್ಲ ಹಲವು ಪ್ರತಿಭೆಗಳನ್ನ ಭಾರತೀಯ ಕ್ರಿಕೆಟ್ ತಂಡಕ್ಕೆ ಕಳುಹಿಸುತ್ತಲೇ ಇದ್ದಾರೆ. ಅದು ಅಂತಿಂಥವರನ್ನಲ್ಲ. ಒಬ್ಬರಿಗಿಂತ ಒಬ್ಬ ಪ್ರತಿಭಾನ್ವಿತರನ್ನ ಹಿರಿಯರ ತಂಡಕ್ಕೆ ಕಳುಹಿಸಿ ಕೊಡ್ತಿದ್ದಾರೆ. ಮಯಾಂಕ್ ಅಗರ್ವಾಲ್, ಪೃಥ್ವಿ ಶಾ, ಹನುಮ ವಿಹಾರಿ, ಆಲ್ರೌಂಡರ್ಗಳಾದ ವಿಜಯ್ ಶಂಕರ್,ಸುಬ್ಮನ್ ಗಿಲ್, ಕೆ.ಎಲ್. ರಾಹುಲ್, ರಹಾನೆ ಹೀಗೆ... ರಾಹುಲ್ ಹುಡುಕಿದ ಪ್ರತಿಭಾನ್ವಿತರ ಪಟ್ಟಿ ಬೆಳೆಯುತ್ತಲೇ ಹೋಗ್ತಿದೆ.
ರಾಹುಲ್ ದ್ರಾವಿಡ್ ಒಬ್ಬ ಗ್ರೇಟ್ ಮೆಂಟರ್ ಅಂತಾರೆ ಮಯಾಂಕ್ ಅಗರ್ವಾಲ್, ಆಸ್ಟ್ರೇಲಿಯಾ ಟೂರ್ನಲ್ಲಿ ತಾವು ಅದ್ಭುತ ಪ್ರದರ್ಶನ ನೀಡಲು ದ್ರಾವಿಡ್ ಕಾರಣ ಎಂದು ಸ್ಮರಿಸುತ್ತಾರೆ ಅವರು. ಟೆಸ್ಟ್ ಕ್ರಿಕೆಟ್ನಲ್ಲಿ ಒಬ್ಬ ಆಟಗಾರ ಮಾನಸಿಕವಾಗಿ ಹೇಗೆ ಸ್ಥಿರವಾಗಿರಬೇಕು ಎಂಬುದನ್ನ ದ್ರಾವಿಡ್ ಅವರಿಂದ ಕಲಿತಿದ್ದೇನೆ ಅಂತಾರೆ ಮಯಾಂಕ್.
ಇನ್ನು ಟಿವಿ ಶೋ ಒಂದರಲ್ಲಿ ವಿವಾದಾತ್ಮಕ ಹೇಳಿಕೆ ನೀಡಿ ಸಂಕಷ್ಟದಲ್ಲಿದ್ದ ಕನ್ನಡಿಗ ಕೆ.ಎಲ್.ರಾಹುಲ್ ಸಹ ಗುರು ದ್ರಾವಿಡ್ ಅವರನ್ನ ನೆನಪಿಸಿಕೊಂಡಿದ್ದಾರೆ. 2 ಪಂದ್ಯ ನಿಷೇಧಕ್ಕೊಳಗಾಗಿದ್ದ ಕೆ.ಎಲ್. ಇಂಡಿಯಾ -ಎ ಟೀಂನಲ್ಲಿ ಉತ್ತಮ ಪ್ರದರ್ಶನಕ್ಕೆ ಪ್ರೇರಣೆ ನೀಡಿದ್ದೇ ಈ ದ್ರಾವಿಡ್. ಈ ವಿಚಾರವನ್ನ ಸ್ವತಃ ಕೆ.ಎಲ್. ರಾಹುಲ್ ಅವರೇ ಹೇಳಿಕೊಂಡಿದ್ದಾರೆ.
ಹೀಗೆ ಯುವ ಪ್ರತಿಭೆಗಳನ್ನ ಭಾರತೀಯ ತಂಡಕ್ಕೆ ನೀಡುತ್ತ. ಭವಿಷ್ಯದ ಭಾರತದ ತಂಡವನ್ನ ಸದೃಢಗೊಳಿಸಲು ದ್ರಾವಿಡ್ ಮೌನವಾಗಿಯೇ ಶ್ರಮ ಹಾಕುತ್ತಿದ್ದಾರೆ.