ವೆಲ್ಲಿಂಗ್ಟನ್: ಟಿ-20 ಸರಣಿ ಮತ್ತು ಏಕದಿನ ಸರಣಿ ಸೇರಿದಂತೆ ಕಳೆದ ಎಂಟು ಪಂದ್ಯದಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಬ್ಯಾಟ್‌ನಿಂದ ಹರಿದುಬಂದ ರನ್‌ಗಳು ಕಡಿಮೆ. ಇದರಲ್ಲಿ ಒಂದು ಟಿ-20 ಪಂದ್ಯದ ವೇಳೆ ಅವರು ವಿಶ್ರಾಂತಿಯಲ್ಲಿದ್ದು ಉಳಿದ ಏಳು ಪಂದ್ಯಗಳಲ್ಲಿ ಮೈದಾನಕ್ಕಿಳಿದಿದ್ದಾರೆ. ಈ ಪಂದ್ಯಗಳಲ್ಲಿ ಒಂದು ಅರ್ಧ ಶತಕ ಬಿಟ್ಟರೆ ಹೇಳಿಕೊಳ್ಳುವ ಸಾಧನೆಯನ್ನೇನೂ ಅವರು ಮಾಡಲಿಲ್ಲ.
ಮೊದಲ ಟಿ-20 ಪಂದ್ಯ:
ಜ.24ರಂದು ಆಕ್ಲೆಂಡ್ನ ಈಡನ್ ಪಾರ್ಕ್ನಲ್ಲಿ ನಡೆದ ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ಕೊಹ್ಲಿ ಕೊಂಚ ಉತ್ತಮವಾಗಿಯೇ ಬ್ಯಾಟ್ ಬೀಸಿದ್ದರು. ಆದ್ರೆ, 45 ರನ್ಗಳಿಸಿದ್ದಾಗ ಟಿಕ್ನರ್ ಎಸೆತದಲ್ಲಿ ಗಪ್ಟಿಲ್ಗೆ ಕ್ಯಾಚ್ ನೀಡಿ ಪೆವಿಲಿಯನ್ ಹಾದಿ ಹಿಡಿದಿದ್ದರು. ಈ ಪಂದ್ಯದಲ್ಲಿ ಭಾರತ ತಂಡ ಆರು ವಿಕೆಟ್ಗಳ ಜಯ ಸಾಧಿಸಿತ್ತು.
ಎರಡನೇ ಟಿ-20 ಪಂದ್ಯ:
ಜ.26ರಂದು ಆಕ್ಲೆಂಡ್ನ ಈಡನ್ ಪಾರ್ಕ್ನಲ್ಲಿ ನಡೆದ ಎರಡನೇ ಟಿ 20 ಪಂದ್ಯದಲ್ಲಿ ಕೊಹ್ಲಿ ಆದಷ್ಟು ಬೇಗ ಪೆವಿಲಿಯನ್ ಸೇರಿದ್ದರು. ಈ ಪಂದ್ಯದಲ್ಲಿ 11 ರನ್ಗಳಿಸಿದ್ದಾಗ ಕೊಹ್ಲಿ ಸೌಥಿ ಎಸೆತದಲ್ಲಿ ಸೀಫರ್ಟ್ಗೆ ಕ್ಯಾಚಿತ್ತು ಔಟಾಗಿದ್ದರು. ಭಾರತ ತಂಡ ಏಳು ವಿಕೆಟ್ಗಳಿಂದ ಜಯ ಸಾಧಿಸಿತ್ತು.
ಮೂರನೇ ಟಿ-20 ಪಂದ್ಯ:
ಜ.29ರಂದು ಹ್ಯಾಮಿಲ್ಟನ್ ಸೆಡ್ಡನ್ ಪಾರ್ಕ್ನಲ್ಲಿ ನಡೆದ ಮೂರನೇ ಟಿ-20 ಪಂದ್ಯದಲ್ಲಿ ಕೊಹ್ಲಿ ಕೊಂಚ ಸಮಯವಷ್ಟೇ ಕ್ರೀಸ್ನಲ್ಲಿದ್ದರು. ಈ ಪಂದ್ಯದಲ್ಲಿ 38 ರನ್ಗಳಿಸಿದ್ದಾಗ ಬೆನೆಟ್ ಎಸೆತದಲ್ಲಿ ಸೌಥಿಗೆ ಕ್ಯಾಚ್ ನೀಡಿ ನಿರ್ಗಮಿಸಿದ್ದರು. ಈ ಪಂದ್ಯ ನ್ಯೂಜಿಲ್ಯಾಂಡ್ ವಿರುದ್ಧ ಭಾರತ ತಂಡ ಸೂಪರ್ ಓವರ್ನಲ್ಲಿ ಜಯ ಸಾಧಿಸಿತ್ತು.
ನಾಲ್ಕನೇ ಟಿ-20 ಪಂದ್ಯ:
ಜ.31ರಂದು ವೆಲ್ಲಿಂಗ್ಟನ್ನ ಸ್ಕೈ ಸ್ಟೇಡಿಯಂನಲ್ಲಿ ನಡೆದ ನಾಲ್ಕನೇ ಟಿ-20 ಪಂದ್ಯದಲ್ಲಿ ಕೊಹ್ಲಿ 11 ರನ್ ಗಳಿಸಿ ಬೆನೆಟ್ ಎಸೆತದಲ್ಲಿ ಸ್ಯಾಂಟ್ನರ್ಗೆ ಕ್ಯಾಚ್ ನೀಡಿ ಔಟಾಗಿದ್ದರು. ಈ ಪಂದ್ಯವನ್ನು ಭಾರತ ಸೂಪರ್ ಓವರ್ನಲ್ಲಿ ಜಯಿಸಿತ್ತು.
ಐದನೇ ಟಿ-20 ಪಂದ್ಯ:
ಫೆ.2ರಂದು ಮೌಂಟ್ ಮೌಂಗನುಯಿಯ ಬೇ ಓವಲ್ ಮೈದಾನದಲ್ಲಿ ನಡೆದ ಐದನೇ ಟಿ 20 ಪಂದ್ಯದಲ್ಲಿ ಕೊಹ್ಲಿಗೆ ರೆಸ್ಟ್ ನೀಡಲಾಗಿತ್ತು. ಈ ಪಂದ್ಯದ ನಾಯಕ ಸ್ಥಾನವನ್ನು ರೋಹಿತ್ ಶರ್ಮಾ ವಹಿಸಿಕೊಂಡಿದ್ದರು. ಈ ಪಂದ್ಯವನ್ನು ಭಾರತ ಏಳು ರನ್ಗಳಿಂದ ರೋಚಕ ಜಯ ಸಾಧಿಸಿತ್ತು. ಈ ಮೂಲಕ ಕಿವೀಸ್ ನಾಡಲ್ಲಿ ಭಾರತ ಐತಿಹಾಸಿಕ ಕ್ಲೀನ್ ಸ್ವೀಪ್ ಸಾಧನೆ ಮಾಡಿತು.
ಮೊದಲನೇ ಏಕದಿನ ಪಂದ್ಯ:
ಫೆ.05ರಂದು ಹ್ಯಾಮಿಲ್ಟನ್ ಸೆಡ್ಡನ್ ಪಾರ್ಕ್ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಕೊಹ್ಲಿ 51 ರನ್ (ಅರ್ಧ ಶತಕ) ಕಲೆ ಹಾಕಿ ಇಶ್ ಸೋಧಿ ಬೌಲಿಂಗ್ಗೆ ಬೌಲ್ಡ್ ಆದರು. ಈ ಪಂದ್ಯದಲ್ಲಿ ಭಾರತ ಸೋಲು ಕಂಡಿತು.
ಎರಡನೇ ಏಕದಿನ ಪಂದ್ಯ:
ಫೆ.08ರಂದು ಆಕ್ಲೆಂಡ್ನ ಈಡನ್ ಪಾರ್ಕ್ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಕೊಹ್ಲಿ ಕೇವಲ 15 ರನ್ ಗಳಿಸಿ ಸೌಥಿ ಬೌಲಿಂಗ್ನಲ್ಲಿ ಮತ್ತೆ ಬೌಲ್ಡ್ ಆದರು. ಈ ಪಂದ್ಯವನ್ನೂ ಕೂಡಾ ನ್ಯೂಜಿಲೆಂಡ್ ಜಯಿಸಿತ್ತು.
ಮೂರನೇ ಏಕದಿನ ಪಂದ್ಯ:
ಫೆ.11ರಂದು ಮೌಂಟ್ ಮೌಂಗನುಯಿಯ ಬೇ ಓವಲ್ ಮೈದಾನದಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಕೊಹ್ಲಿ ಕೇವಲ 9 ರನ್ ಗಳಿಸಿ ಔಟಾದರು. ಈ ಪಂದ್ಯದಲ್ಲಿ ನಾಯಕ ಕೊಹ್ಲಿ, ಬೆನೆಟ್ ಬೌಲಿಂಗ್ನಲ್ಲಿ ಜೇಮಿಸನ್ಗೆ ಕ್ಯಾಚ್ ನೀಡಿ ಪೆವಿಲಿಯನ್ ಹಾದಿ ಹಿಡಿದರು. ಈ ಪಂದ್ಯವನ್ನು 3-0 ಅಂತರದಲ್ಲಿ ಕಿವೀಸ್ ಗೆಲ್ಲುವುದರ ಮೂಲಕ ತಮ್ಮದೇ ನಾಡಲ್ಲಿ ಸರಣಿ ಕ್ಲೀನ್ ಸ್ವೀಪ್ ಮಾಡಿ ಸೇಡು ತೀರಿಸಿಕೊಂಡಿತು.
ಭಾರತ ತಂಡದ ನಾಯಕ ಈ ಎರಡು ಸರಣಿಯಲ್ಲಿ ಒಟ್ಟು ಏಳು ಪಂದ್ಯಗಳನ್ನಾಡಿ 180 ರನ್ ಕಲೆ ಹಾಕಿದ್ದಾರೆ. ರನ್ ಮಷಿನ್ ಎಂಬ ಖ್ಯಾತಿ ಪಡೆದಿದ್ದ ಕೊಹ್ಲಿ ನ್ಯೂಜಿಲ್ಯಾಂಡ್ ನೆಲದಲ್ಲಿ ಫಾರ್ಮ್ ಕಳೆದುಕೊಂಡ್ರಾ? ಎಂಬ ಅನುಮಾನಗಳು ಕಾಡತೊಡಗಿವೆ. ಫೆ.21ರಿಂದ ಮೊದಲ ಟೆಸ್ಟ್ ಆರಂಭವಾಗಲಿದ್ದು ಮತ್ತೆ ಬ್ಯಾಟಿಂಗ್‌ನಲ್ಲಿ ಲಯ ಕಂಡುಕೊಳ್ತಾರಾ ಕಾದು ನೋಡೋಣ.