ಸಿಡ್ನಿ: ಆಸ್ಟ್ರೇಲಿಯಾ ಎ ತಂಡದ ವಿರುದ್ಧ ಮುಕ್ತಾಯವಾದ ಅಭ್ಯಾಸ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಟೀಂ ಇಂಡಿಯಾ ಯುವ ವಿಕೆಟ್ ಕೀಪರ್ ರಿಷಭ್ ಪಂತ್ ಕುರಿತು ವೀಕ್ಷಕ ವಿವರಣೆಕಾರ ಆಕಾಶ್ ಚೋಪ್ರಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪಿಂಕ್ ಬಾಲ್ ಅಭ್ಯಾಸ ಪಂದ್ಯದಲ್ಲಿ ಅಬ್ಬರಿಸಿದ್ದ ರಿಷಭ್ ಪಂತ್ ಆರಂಭದಿಂದಲೂ ಆಕ್ರಮಣಕಾರಿಯಾಗಿ ಬ್ಯಾಟ್ ಬೀಸಿದ್ದರು. ಕೇವಲ 73 ಎಸೆತಗಳಲ್ಲಿ 9 ಬೌಂಡರಿ ಮತ್ತು 6 ಸಿಕ್ಸರ್ಗಳ ನೆರವಿನಿಂದ 103 ರನ್ಗಳಿಸಿದ್ರು.
ಪಂತ್ ಬ್ಯಾಟಿಂಗ್ ವಿಡಿಯೋವನ್ನು ಯೂಟ್ಯೂಬ್‌ನಲ್ಲಿ ಹಂಚಿಕೊಂಡಿರುವ ಆಕಾಶ್ ಚೋಪ್ರಾ, ಆಟದ ಗತಿಯನ್ನು ಬದಲಿಸುವ ಸಾಮರ್ಥ್ಯ ಪಂತ್ ಅವರಲ್ಲಿದೆ. ಹೀಗಾಗಿ ಅವರು ಆ್ಯಡಂ ಗಿಲ್‌ಕ್ರಿಸ್ಟ್ ಆಟವನ್ನು ನೆನಪಿಸುತ್ತಾರೆ ಎಂದಿದ್ದಾರೆ.
ಓದಿ ಉತ್ತಮ ಫಾರ್ಮ್ನಲ್ಲಿ ಸಹಾ, ಪಂತ್: ಟೀಂ ಇಂಡಿಯಾಕ್ಕೆ ಹೊಸ ತಲೆನೋವು
"ಎದುರಾಳಿ ಬೌಲಿಂಗ್ ಪಡೆಯನ್ನು ಪುಡಿಗಟ್ಟಿ ತಂಡಕ್ಕೆ ಮೇಲುಗೈ ನೀಡುವುದು ಪಂತ್ ಬ್ಯಾಟಿಂಗ್‌ನ ಉತ್ಕೃಷ್ಟತೆ ತೋರಿಸುತ್ತದೆ. ಆತ ಗಿಲ್‌ಕ್ರಿಸ್ಟ್ ರೀತಿಯ ಆಟಗಾರ. ಗಿಲ್‌ಕ್ರಿಸ್ಟ್ ಸಾಧನೆ ಅಪಾರವಾಗಿದೆ. ಆದರೆ ರಿಷಭ್ ಪಂತ್ ಅವರ ವೃತ್ತಿಜೀವನ ಈಗಷ್ಟೇ ಆರಂಭವಾಗಿದೆ. ಪಂತ್ ಯಾವಾಗ ಬ್ಯಾಟಿಂಗ್ ಮಾಡುತ್ತಾರೋ ಆಗ ಗಿಲ್‌ಕ್ರಿಸ್ಟ್ ಅವರನ್ನು ನೆನಪಿಸುತ್ತಾರೆ. ಗಿಲ್‌ಕ್ರಿಸ್ಟ್ ಅವರ ಸಾಧನೆಯ ಸನಿಹಕ್ಕೆ ಈತ ತಲುಪಬಲ್ಲ ಎನಿಸುತ್ತದೆ" ಎಂದು ಹೇಳಿದ್ದಾರೆ.
ಅಭ್ಯಾಸ ಪಂದ್ಯದ ಎರಡನೇ ದಿನದಾಟದ ಅಂತಿಮ ಓವರ್ನಲ್ಲಿ ಅಬ್ಬರಿಸಿದ್ದ ಪಂತ್, 4 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 22 ರನ್ ಸಿಡಿಸಿ ಶತಕದ ಗಡಿ ಮುಟ್ಟಿದ್ದರು.