ಸಿಡ್ನಿ: ಆಸ್ಟ್ರೇಲಿಯಾದ ಸ್ಟಾರ್ ಬೌಲರ್ ಜೋಸ್ ಹೆಜಲ್ವುಡ್ ಭಾರತ ಆಸ್ಟ್ರೇಲಿಯಾ ಆಟಗಾರರು ಒಳಗೊಂಡ ಟೆಸ್ಟ್ ತಂಡವನ್ನು ಘೋಷಿಸಿದ್ದು, ಅದರಲ್ಲಿ ಭಾರತದ 6 ಹಾಗೂ ಆಸ್ಟ್ರೇಲಿಯಾದ 6 ಆಟಗಾರರನ್ನು ಆಯ್ಕೆ ಮಾಡಿದ್ದಾರೆ.
ಭಾರತ ತಂಡ ಡಿಸೆಂಬರ್ನಲ್ಲಿ ಟೆಸ್ಟ್ ಸರಣಿಯನ್ನಾಡಲು ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳುತ್ತಿದೆ. ಐಪಿಎಲ್ ಟೂರ್ನಿ ಮುಗಿಯುತ್ತಿದ್ದಂತೆ ಕೊಹ್ಲಿ ಪಡೆ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ. ಅಲ್ಲಿ 4 ಪಂದ್ಯಗಳ ಟೆಸ್ಟ್ ಸರಣಿ ಹಾಗೂ 3 ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ. ಇನ್ನು ಟಿ20 ಸರಣಿಯನ್ನು ರದ್ದು ಮಾಡುವ ಕುರಿತು ಮಾತುಕತೆ ನಡೆಯುತ್ತಿದೆ.
ಈ ಸಂದರ್ಭದಲ್ಲಿ ಸಂದರ್ಶನವೊಂದರಲ್ಲಿ ಪಾಲ್ಗೊಂಡಿದ್ದ ಆಸೀಸ್ ವೇಗಿ ಜೋಶ್ ಹೇಜಲ್ವುಡ್, ಇಂಡಿಯಾ- ಆಸ್ಟ್ರೇಲಿಯಾ ಆಟಗಾರರು ಒಳಗೊಂಡ ಸಮ್ಮಿಶ್ರ 11ರ ಬಳಗವನ್ನು ಹೆಸರಿಸಿದ್ದಾರೆ. ಈ ತಂಡದಲ್ಲಿ ಭಾರತದ 6 ಹಾಗೂ ಆಸ್ಟ್ರೇಲಿಯಾದ 6 ಆಟಗಾರರನ್ನು ಹೆಸರಿಸಿದ್ದಾರೆ.
ತಂಡವನ್ನು ಆಯ್ಕೆ ಮಾಡುವಾಗ ಎಲ್ಲರೂ ಆರಂಭಿಕ ಬ್ಯಾಟ್ಸ್ಮನ್ಗಳಿಂದ ಆರಂಭಿಸುತ್ತಾರೆ ಆದರೆ, ಹೇಜಲ್ವುಡ್ ತಾವೂ ಪೇಸರ್ಗಳಿಂದ ಆಯ್ಕೆ ಮಾಡುವುದಾಗಿ ತಿಳಿಸಿ ಮೊದಲಿಗೆ ತಮ್ಮ ಹೆಸರು, ನಂತರ ಪ್ಯಾಟ್ ಕಮ್ಮಿನ್ಸ್ ಹಾಗೂ ಜಸ್ಪ್ರೀತ್ ಬುಮ್ರಾ ಹೆಸರನ್ನು ಆಯ್ಕೆ ಮಾಡಿದ್ದಾರೆ. ಸ್ಪಿನ್ನರ್ ವಿಭಾಗದಲ್ಲಿ ಅಶ್ವಿನ್ ಹಾಗೂ ಆಸ್ಟ್ರೇಲಿಯಾದ ನಥನ್ ಲಿಯಾನ್ರನ್ನು ಆಯ್ಕೆ ಮಾಡಿದ್ದು, ಅವರಿಬ್ಬರಲ್ಲಿ ಆಸ್ಟ್ರೇಲಿಯಾ ಪಂದ್ಯಗಳಿಗೆ ಲಿಯಾನ್ ರನ್ನು, ಭಾರತದಲ್ಲಿ ನಡೆಯುವ ಪಂದ್ಯಗಳಿಗೆ ಅಶ್ವಿನ್ರನ್ನು ಪ್ಲೇಯಿಂಗ್ ಇಲೆವೆನ್ನಲ್ಲಿ ಆಯ್ಕೆ ಮಾಡುವುದಾಗಿ ತಿಳಿಸಿದ್ದಾರೆ.
ಇನ್ನು ಆರಂಭಿಕರಾಗಿ ಕನ್ನಡಿಗ ಮಯಾಂಕ್ ಮತ್ತು ಡೇವಿಡ್ ವಾರ್ನರ್, 3 ಮತ್ತು 4ನೇ ಕ್ರಮಾಂಕಕ್ಕೆ ಸ್ಟಿವ್ ಸ್ಮಿತ್ ಹಾಗೂ ವಿರಾಟ್ ಕೊಹ್ಲಿ, ಮಧ್ಯಮ ಕ್ರಮಾಂದಲ್ಲಿ ಪೂಜಾರ, ಲ್ಯಾಬುಶೇನ್, ರೋಹಿತ್ ಶರ್ಮಾರನ್ನು ಆಯ್ಕೆ ಮಾಡಿದ್ದಾರೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸರಣಿ ಆ್ಯಶಸ್ ಸರಣಿಯಷ್ಟೆ ಮಹತ್ವ ಪಡೆದಿದೆ
" 2019/20 ಸರಣಿಗಿಂತ ನಮ್ಮ ತಂಡದ ಬ್ಯಾಟಿಂಗ್ ವಿಭಾಗ ಈ ಬಾರಿ ಬಲಿಷ್ಠವಾಗಿದೆ. ಕಳೆದ ಪ್ರವಾಸದಲ್ಲಿ ಭಾರತೀಯ ಬೌಲರ್ಗಳು ನಮ್ಮ ಬ್ಯಾಟಿಂಗ್ ವಿಭಾಗದ ವಿರುದ್ಧ ಪ್ರಾಬಲ್ಯ ಸಾಧಿಸಿದ್ದರು. ಆದರೆ ಈ ಬಾರಿ ಅದು ನಡೆಯದಂತೆ ನಮ್ಮ ತಂಡ ಎಚ್ಚರಿಕೆ ವಹಿಸಬೇಕಿದೆ. ಇನ್ನು ಭಾರತ ಮತ್ತು ಆಸ್ಟ್ರೇಲಿಯಾ ಸರಣಿಯನ್ನ ಎಲ್ಲರೂ ಎದುರು ನೋಡುತ್ತಿದ್ದು, ಇದು ಕೂಡ ಆ್ಯಶಸ್ ಸರಣಿಯಷ್ಟೆ ಪ್ರಾಮುಖ್ಯತೆ ಪಡೆದಿದೆ ಎಂದು ಆಸ್ಟ್ರೇಲಿಯಾ ಪರ 51 ಟೆಸ್ಟ್ಗಳಲ್ಲಿ 195 ಹಾಗೂ 48 ಏಕದಿನ ಪಂದ್ಯಗಳಲ್ಲಿ 78 ವಿಕೆಟ್ ಪಡೆದಿರುವ ಹೇಜಲ್ವುಡ್ ತಿಳಿಸಿದ್ದಾರೆ.
ಹೇಜಲ್ವುಡ್ ಘೋಷಿಸಿದ ಭಾರತ- ಆಸ್ಟ್ರೇಲಿಯಾ XI:
ಮಯಾಂಕ್ ಅಗರ್ವಾಲ್,ಡೇವಿಡ್ ವಾರ್ನರ್,ಸ್ಟೀವ್ ಸ್ಮಿತ್ ,ವಿರಾಟ್ ಕೊಹ್ಲಿ,ಚೇತೇಶ್ವರ್ ಪೂಜಾರ,ಮಾರ್ನಸ್ ಲಾಬುಶೇನ್,ರೋಹಿತ್ ಶರ್ಮಾ,,ನೇಥನ್ ಲಯಾನ್/ಆರ್. ಅಶ್ವಿನ್ ,ಪ್ಯಾಟ್ ಕಮಿನ್ಸ್ ,ಜೋಶ್ ಹೇಝಲ್‌ವುಡ್, ಜಸ್‌ಪ್ರೀತ್ ಬುಮ್ರಾ.