ಬೆಂಗಳೂರು: ಭಾನುವಾರ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಅಂತಿಮ ಏಕದಿನ ಪಂದ್ಯದಲ್ಲಿ ಫೀಲ್ಡಿಂಗ್ ವೇಳೆ ಭುಜಕ್ಕೆ ಪೆಟ್ಟು ಮಾಡಿಕೊಂಡು ಹೊರ ನಡೆದ ಆರಂಭಿಕ ಆಟಗಾರ ಶಿಖರ್ ಧವನ್ ನ್ಯೂಜಿಲ್ಯಾಂಡ್ ಪ್ರವಾಸ ಕೈಗೊಳ್ಳುವುದು ಅನುಮಾನವಾಗಿದೆ.
ಆಸ್ಟ್ರೇಲಿಯಾ ಆರಂಭಿಕ ಆಟಗಾರ ಆರೋನ್ ಫಿಂಚ್ ಹೊಡೆದ ಚೆಂಡನ್ನು ತಡೆಯಲು ಡೈವ್ ಮಾಡಿದ ಸಂದರ್ಭದಲ್ಲಿ ಧವನ್ ಎಡ ಭುಜಕ್ಕೆ ಪೆಟ್ಟು ಮಾಡಿಕೊಂಡು ಮೈದಾನದಿಂದ ಹೊರ ನಡೆದರು. ಇವರ ಬದಲು ಯಜುವೇಂದ್ರ ಚಹಲ್ ಬದಲಿ ಆಟಗಾರನಾಗಿ ಫೀಲ್ಡಿಂಗ್ ನಡೆಸಿದರು.
ತಕ್ಷಣ ಧವನ್ಗೆ ವೈದ್ಯಕೀಯ ಪರೀಕ್ಷೆ ನಡೆಸಿದ್ದು, ಎಡ ಭುಜಕ್ಕೆ ಪೆಟ್ಟಾಗಿರುವುದು ಎಕ್ಸ್-ರೇನಲ್ಲಿ ದೃಢಪಟ್ಟಿದೆ. ಸದ್ಯ ವಿಶ್ರಾಂತಿ ಪಡೆಯುತ್ತಿರುವ ಶಿಖರ್ ಇದೇ ತಿಂಗಳ 24ರಿಂದ ಆರಂಭವಾಗುವ ಭಾರತ ಮತ್ತು ನ್ಯೂಜಿಲ್ಯಾಂಡ್ ವಿರುದ್ಧದ ಟಿ-20 ಸರಣಿ ಆಡುವುದು ಅನುಮಾನವಾಗಿದೆ.
ಇಂದು ಟಿಂ ಇಂಡಿಯಾ ಟಿ-20 ತಂಡ ನ್ಯೂಜಿಲ್ಯಾಂಡ್ನತ್ತ ಪ್ರಯಾಣ ಬೆಳೆಸಲಿದೆ. ಹೀಗಾಗಿ ಧವನ್ ಸರಣಿಯಲ್ಲಿ ಪಾಲ್ಗೊಳ್ಳುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಈ ಬಗ್ಗೆ ಮಾತನಾಡಿರುವ ಬಿಸಿಸಿಐ ಮಾಧ್ಯಮ ವಕ್ತಾರರು, ಶಿಖರ್ ಧವನ್ ಸ್ಕ್ಯಾನಿಂಗ್ ರಿಪೋರ್ಟ್ ಬಂದಿದೆ. ವೈದ್ಯರು ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಅವರ ಆರೋಗ್ಯದ ಸ್ಥಿತಿ ಗಮನಿಸಲಾಗುತ್ತದೆ. ನಾವು ಹೊರಡುವ ವೇಳೆ ಧವನ್ ಪಾಲ್ಗೊಳ್ಳುವ ಕುರಿತು ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.
34 ವರ್ಷದ ಶಿಖರ್ ಧವನ್ ಆಸೀಸ್ ವಿರುದ್ಧದ ಸರಣಿಯಲ್ಲಿ ಫೀಲ್ಡಿಂಗ್ ಮಾಡಲು ಸಾಧ್ಯವಾಗಲೇ ಇಲ್ಲ. ಎರಡನೇ ಪಂದ್ಯದ ಸಂದರ್ಭದಲ್ಲೂ ಶಿಖರ್ ಧವನ್ ಪ್ಯಾಟ್ ಕಮ್ಮಿನ್ಸ್ ಬೌಲಿಂಗ್ನಲ್ಲಿ ಚೆಂಡು ಪಕ್ಕೆಲುಬಿಗೆ ಬಿದ್ದು ಗಾಯಗೊಂಡಿದ್ದರು. ಉತ್ತಮ ಫಾರ್ಮ್ನಲ್ಲಿದ್ದ ಶಿಖರ್ ಅಲಭ್ಯರಾದರೆ ಟೀಂ ಇಂಡಿಯಾಕ್ಕೆ ಕೊಂಚ ಹಿನ್ನಡೆಯಾಗಲಿದೆ.