ಲಾಹೋರ್: ಪಾಕಿಸ್ತಾನದ ಮಾಜಿ ಆರಂಭಿಕ ಬ್ಯಾಟ್ಸ್ಮನ್ ತೌಫಿಕ್ ಉಮರ್ಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ಕ್ರಿಕೆಟ್ ಪಾಕಿಸ್ತಾನ ವೆಬ್ಸೈಟ್ ವರದಿ ಮಾಡಿದೆ.
ವಿಶ್ವವನ್ನೇ ಭೀತಿಗೀಡು ಮಾಡಿರುವ ಮಹಾಮಾರಿ ಕೊರೊನಾ ಕ್ರಿಕೆಟ್ ಜಗತ್ತಿಗೂ ವ್ಯಾಪಿಸಿದೆ. ಈಗಾಗಲೇ ಹಲವು ಕ್ರಿಕೆಟ್ ಟೂರ್ನಮೆಂಟ್ಗಳು ಕೊರೊನಾ ಭೀತಿಯಿಂದ ರದ್ದಾಗಿವೆ. ಇದೀಗ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ತೌಫಿಕ್ ಉಮರ್ಗೂ ಕೊರೊನಾ ಸೋಂಕು ತಗುಲಿದೆ. ಮನೆಯಲ್ಲಿ ಹೋಮ್ ಕ್ವಾರಂಟೈನ್ನಲ್ಲಿದ್ದ ಅವರಿಗೆ ಕೊರೊನಾ ಲಕ್ಷಣಗಳು ಕಂಡು ಬಂದಿದ್ದು, ಪರೀಕ್ಷೆ ನಡೆಸಿದಾಗ ಪಾಸಿಟಿವ್ ವರದಿ ಬಂದಿದೆ.
38 ವರ್ಷದ ತೌಫಿಕ್ ಕೊರೊನಾ ಸೋಂಕಿಗೆ ಒಳಗಾಗಿರುವ ವಿಶ್ವದ ನಾಲ್ಕನೇ ಕ್ರಿಕೆಟಿಗ ಹಾಗೂ ಪಾಕಿಸ್ತಾನದ 2ನೇ ಕ್ರಿಕೆಟಿಗರಾಗಿದ್ದಾರೆ. ಈ ಮೊದಲು ಪಾಕ್ನ ಮಾಜಿ ಪ್ರಥಮ ದರ್ಜೆ ಕ್ರಿಕೆಟಿಗ ಜಾಫರ್ ಸರ್ಫರಾಜ್ ಕೊರೊನಾ ತಗುಲಿತ್ತು. ಸ್ಕಾಟ್ಲೆಂಡ್ನ ಸ್ಪಿನ್ನರ್ ಮಜೀದ್ ಹಕ್ ಮತ್ತು ದಕ್ಷಿಣ ಆಫ್ರಿಕಾದ ಪ್ರಥಮ ದರ್ಜೆ ಕ್ರಿಕೆಟಿಗ ಸೊಲೊ ಎನ್‌ಕ್ವೆನಿಗೂ ಕೊರೊನಾ ಸೋಂಕು ತಗುಲಿತ್ತು.
‘ಕಳೆದ ರಾತ್ರಿ ಅನಾರೋಗ್ಯದಿಂದ್ದೇನೆ ಎಂದೆನಿಸಿತ್ತು. ಆದ್ದರಿಂದ ನಾನೇ ಪರೀಕ್ಷೆಗೆ ಒಳಗಾದಾಗ ಪಾಸಿಟಿವ್ ವರದಿ ಬಂದಿದೆ. ಆದರೆ ನನ್ನ ಲಕ್ಷಣಗಳು ಗಂಭೀರವಾಗಿಲ್ಲ ’ ಎಂದು ತೌಫಿಕ್ ಉಮರ್ ಮಾಧ್ಯಮಕ್ಕೆ ತಿಳಿಸಿದ್ದಾರೆ.
2000ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ತೌಫಿಕ್ ಉಮರ್ 2003ರ ವಿಶ್ವಕಪ್ ತಂಡದಲ್ಲೂ ಅವಕಾಶ ಪಡೆದಿದ್ದರು. ಎಡಗೈ ಆಟಗಾರನಾಗಿದ್ದ ತೌಫಿಕ್ ತಮ್ಮ ಪದಾರ್ಪಣೆ ಪಂದ್ಯದಲ್ಲೇ ಶತಕ ಸಿಡಿಸಿದ್ದರು. ಇವರು 44 ಟೆಸ್ಟ್‌ಗಳಿಂದ 7 ಶತಕ, 14 ಅರ್ಧಶತಕಗಳ ಸಹಿತ 2,963 ರನ್ , 12 ಏಕದಿನ ಪಂದ್ಯಗಳಿಂದ 504 ರನ್ ಪೇರಿಸಿದ್ದಾರೆ.