ಮ್ಯಾಂಚೆಸ್ಟರ್: ಪಾಕಿಸ್ತಾನ-ಇಂಗ್ಲೆಂಡ್ ನಡುವೆ ಟೆಸ್ಟ್ ಸರಣಿಯ ಮೊದಲ ಪಂದ್ಯ ನಿನ್ನೆ ಆರಂಭಗೊಂಡಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿರುವ ಆತಿಥೇಯರು 326 ರನ್ಗಳಿಕೆ ಮಾಡಿ ಉತ್ತಮ ಸ್ಥಿತಿಯಲ್ಲಿದ್ದಾರೆ. ಈ ವೇಳೆ ಮೈದಾನದಲ್ಲಿ ಕುತೂಹಲಕಾರಿ ಸನ್ನಿವೇಶ ನಡೆಯಿತು.
ಪಾಕ್ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ಸರ್ಫರಾಜ್ ಅಹ್ಮದ್ 12ನೇ ಆಟಗಾರನಾಗಿ ಮೈದಾನಕ್ಕಿಳಿದು ಸಹ ಆಟಗಾರನಿಗೋಸ್ಕರ ಶೂ, ನೀರಿನ ಬಾಟಲಿ ತೆಗೆದುಕೊಂಡು ಬಂದಿದ್ದರು. ಈ ಘಟನೆ ಪಾಕಿಸ್ತಾನದ ಮಾಜಿ ಆಟಗಾರರ ಆಕ್ರೋಶಕ್ಕೆ ಕಾರಣವಾಗಿದೆ.
ಪಾಕ್ ತಂಡದ ಮಾಜಿ ನಾಯಕನೊಬ್ಬನನ್ನು ಈ ರೀತಿಯಾಗಿ ನಡೆಸಿಕೊಳ್ಳುತ್ತಿರುವುದು ಶೋಭೆ ತರುವಂಥದ್ದಲ್ಲ. ಒಂದ್ವೇಳೆ ಅವರೇ ಸ್ವಯಂಪ್ರೇರಿತರಾಗಿ ಈ ರೀತಿ ನಡೆದುಕೊಂಡಿದ್ದರೆ ಮುಂದಿನ ದಿನಗಳಲ್ಲಿ ಇಂಥ ಬೆಳವಣಿಗೆಗಳನ್ನು ತಡೆಯಿರಿ ಎಂದು ಪಾಕ್ ತಂಡದ ಮಾಜಿ ವೇಗದ ಬೌಲರ್ ಶೋಯಬ್ ಅಖ್ತರ್ ಪಾಕಿಸ್ತಾನ ಕ್ರಿಕೆಟ್ ಬೋರ್ಡ್‌ಗೆ ತಿಳಿಸಿದ್ದಾರೆ.
ಸರ್ಫರಾಜ್ ಸಾಧನೆ:
2016ರ ಟಿ-20 ವಿಶ್ವಕಪ್ ಬಳಿಕ ತಂಡದ ನಾಯಕನಾಗಿ ನೇಮಕಗೊಂಡಿರುವ ಸರ್ಫರಾಜ್ ಅಹ್ಮದ್, ಪಾಕ್ ತಂಡವನ್ನು ನಾಲ್ಕು ವರ್ಷಗಳ ಕಾಲ ಮುನ್ನಡೆಸಿದ್ದರು. 2017ರ ಚಾಂಪಿಯನ್ ಟ್ರೋಫಿಯಲ್ಲಿ ತಂಡ ಪ್ರಶಸ್ತಿ ಗೆಲ್ಲುವಲ್ಲಿ ಅವರ ಪಾತ್ರ ಮಹತ್ವದ್ದಾಗಿತ್ತು. ಇದೀಗ ನಾಯಕತ್ವ ಜವಾಬ್ದಾರಿಯಿಂದ ಅವರನ್ನು ಕೆಳಗಿಳಿಸಲಾಗಿದೆ.
2017ರಲ್ಲಿ ಇಂಗ್ಲೆಂಡ್ನಲ್ಲಿ ನಡೆದಿದ್ದ ಚಾಂಪಿಯನ್ ಟ್ರೋಫಿಯಲ್ಲಿ ಸರ್ಫರಾಜ್ ಅಹ್ಮದ್ ನೈತೃತ್ವದ ಪಾಕ್ ತಂಡ ಪ್ರಶಸ್ತಿಗೆ ಮುತ್ತಿಕ್ಕಿತ್ತು. ಕಳೆದ ವರ್ಷ ನಡೆದ ವಿಶ್ವಕಪ್ ಸೆಮಿಫೈನಲ್ವರೆಗೂ ತಂಡವನ್ನು ಇವರು ಲೀಡ್ ಮಾಡಿದ್ದರು.