ಲಂಡನ್ : ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆ ಸೆಪ್ಟೆಂಬರ್ನಲ್ಲಿ ನಡೆಯಬೇಕಿದ್ದ ಸೀಮಿತ ಓವರ್ಗಳ ಸರಣಿ ಮುಂದಿನ ವರ್ಷಕ್ಕೆ ಮುಂದೂಡುವ ಸಾಧ್ಯತೆಯಿದೆ ಎನ್ನಲಾಗಿದೆ.
ಇಂಗ್ಲೆಂಡ್, ಭಾರತದ ವಿರುದ್ಧ 3 ಏಕದಿನ ಹಾಗೂ ಕೆಲವು ಟಿ20 ಪಂದ್ಯಗಳನ್ನಾಡಲು ಸೆಪ್ಟೆಂಬರ್ 16ರಂದು ಭಾರತಕ್ಕೆ ಪ್ರವಾಸ ಕೈಗೊಳ್ಳಬೇಕಿತ್ತು. ಇಂಗ್ಲೆಂಡ್ ದಿನಪತ್ರಿಕೆಯ ಪ್ರಕಾರ ಟಿ20 ವಿಶ್ವಕಪ್ ಮುಂದೂಡುವ ಸಾಧ್ಯತೆಯಿರುವುದರಿಂದ 13ನೇ ಆವೃತ್ತಿಯ ಐಪಿಎಲ್ ಸೆಪ್ಟೆಂಬರ್ ಕೊನೆಯವಾರದಲ್ಲಿ ಆರಂಭವಾಗಲಿದೆ.
ಇದರಿಂದಾಗಿ ಇಂಗ್ಲೆಂಡ್ ತಂಡ ಭಾರತ ಪ್ರವಾಸ ಕೈಗೊಳ್ಳುವ ಸಾಧ್ಯತೆ ಕಡಿಮೆಯಿದೆ. ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಬೋರ್ಡ್ ಮತ್ತು ಬಿಸಿಸಿಐ ನಡುವೆ ಈಗಾಗಲೇ ಮಾತುಕತೆ ನಡೆಯುತ್ತಿದೆ. 5 ಪಂದ್ಯಗಳ ಟೆಸ್ಟ್ ಸರಣಿ ಜತೆಗೆ ಸೀಮಿತ ಓವರ್ಗಳ ಸರಣಿ ಮುಂದಿನ ವರ್ಷಕ್ಕೆ ಮುಂದೂಡುವ ಸಾಧ್ಯತೆಯಿದೆ ಎಂದು ವರದಿ ಹೇಳಿದೆ.
ಇದಕ್ಕೂ ಮುನ್ನ ಬಿಸಿಸಿಐ ಸೆಪ್ಟೆಂಬರ್ ಕೊನೆಯಿಂದ ನವೆಂಬರ್ ಮೊದಲ ವಾರದೊಳಗೆ ಶ್ರೀಮಂತ ಕ್ರಿಕೆಟ್ ಲೀಗ್ ಆಯೋಜಿಸುವ ಆಲೋಚನೆಯಲ್ಲಿದೆ. ವರದಿಗಳ ಪ್ರಕಾರ ಐಪಿಎಲ್ 2020 ವಿದೇಶದಲ್ಲಿ ನಡೆಯಲಿದೆ. ಶ್ರೀಲಂಕಾ ಅಥವಾ ಯುಎಇನಲ್ಲಿ ಆಯೋಜಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಇದಕ್ಕಾಗಿ ಟಿ20 ವಿಶ್ವಕಪ್ ಕುರಿತು ಐಸಿಸಿಯಿಂದ ಅಧಿಕೃತ ನಿರ್ಧಾರಕ್ಕಾಗಿ ಬಿಸಿಸಿಐ ಕಾಯುತ್ತಿದೆ.