ಸೌತಾಂಪ್ಟನ್: ಪಾಕಿಸ್ತಾನ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಹಾಗೂ ಅಂತಿಮ ಟೆಸ್ಟ್ ಬಹಳ ರೋಹತ ಹಂತಕ್ಕೆ ತಲುಪಿದ್ದು, ಅಂತಿಮ ದಿನ ಇಂಗ್ಲೆಂಡ್ ಗೆಲ್ಲಲು 8ವಿಕೆಟ್ ಅಗತ್ಯವಿದ್ದರೆ, ಪಾಕ್ ಡ್ರಾ ಸಾಧಿಸಲು ಹೋರಾಟ ನಡೆಸಲು ಸಜ್ಜಾಗಿದೆ.
ಮೊದಲ ಇನ್ನಿಂಗ್ಸ್ನಲ್ಲಿ ಇಂಗ್ಲೆಂಡ್ ತಂಡ 583 ರನ್ಗಳಿಸಿ ನಿವೃತ್ತಿ ಘೋಷಿಸಿಕೊಂಡಿದೆ. ಇದಕ್ಕುತ್ತರವಾಗಿ ಮೊದಲ ಇನ್ನಿಂಗ್ಸ್ನಲ್ಲಿ 273ಕ್ಕೆ ಆಲೌಟ್ ಆದ ಪಾಕ್ ತಂಡ ಫಾಲೋಆನ್ಗೂ ಗುರಿಯಾಗಿದೆ. ಇದೀಗ 310 ರನ್ಗಳೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಪಾಕ್ 100 ರನ್ಗಳಿಸಿ 2 ವಿಕೆಟ್ ಕಳೆದುಕೊಂಡಿದೆ.
ಇಂದು ಕೊನೆಯ ದಿನವಾಗಿದ್ದು ಇಂಗ್ಲೆಂಡ್ ತಂಡ ಗೆಲುವು ಸಾಧಿಸಲು ಪಾಕಿಸ್ತಾನದ ಉಳಿದ 8 ವಿಕೆಟ್ ಪಡೆಯಬೇಕಿದೆ. ಆ್ಯಂಡರ್ಸನ್ ಮತ್ತು ಸ್ಟುವರ್ಟ್ ಬ್ರಾಡ್ ಅತ್ಯುತ್ತಮ ಫಾರ್ಮ್ನಲ್ಲಿರುವುದರಿಂದ ಗೆಲುವಿನ ಸಾಧ್ಯತೆ ಹೆಚ್ಚಿದೆ.
ಇನ್ನು ಪಾಕಿಸ್ತಾನ ಫಾಲೋ ಆನ್ಗೆ ಒಳಗಾದ ಕಳೆದ ಎಲ್ಲಾ 10 ಟೆಸ್ಟ್ಗಳಲ್ಲೂ ಸೋಲು ಕಂಡಿದೆ. ಕೊನೆಯ ದಿನ ಬೌಲರ್ಗಳಿಗೆ ನೆರವು ನೀಡುವುದರಿಂದ ಪಾಕಿಸ್ತಾನಕ್ಕೆ ಸೋಲು ತಪ್ಪಿಸಿಕೊಳ್ಳಲು ಹರ ಸಾಹಸ ಪಡಬೇಕಿದೆ. ಈಗಾಗಲೆ 4 ನೇ ದಿನ ಮಳೆ ಹಾಗೂ ಮಂದಬೆಳಕು ಅಡ್ಡಪಡಿಸಿರುವುದರಿಂದ ಪಾಕಿಸ್ತಾನ 5ನೇ ದಿನವೂ ಕೂಡ ಇದೇ ವಾತಾವರಣವನ್ನು ಎದುರು ನೋಡುತ್ತಿದೆ.
ಆ್ಯಂಡರ್ಸನ್ ವಿಶ್ವದಾಖಲೆಗೆ ಬೇಕು ಒಂದು ವಿಕೆಟ್:
ಇಂಗ್ಲೆಂಡ್ ತಂಡದ ಬೌಲರ್ ಜೇಮ್ಸ್ ಆ್ಯಂಡರ್ಸನ್ ಒಂದು ವಿಕೆಟ್ ಪಡೆದರೆ ಟೆಸ್ಟ್ ಕ್ರಿಕೆಟ್ನಲ್ಲಿ 600 ವಿಕೆಟ್ ಪಡೆದ ಮೊದಲ ಬೌಲರ್ ಎಂಬ ವಿಶ್ವದಾಖಲೆಗೆ ಪಾತ್ರರಾಗಲಿದ್ದಾರೆ. ಕೊನೆಯ ದಿನವಾದ ಇಂದು ಅವರು ವಿಶ್ವದಾಖಲೆಯ ವಿಕೆಟ್ ಯಾರಾಗಲಿದ್ದಾರೆ ಎಂಬುದು ಕುತೂಹಲಕಾರಿಯಾಗಿದೆ.