ಕೋಲ್ಕತ್ತಾ: ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಈಗಾಗಲೇ ಪ್ರಾರಂಭಗೊಳ್ಳಬೇಕಾಗಿತ್ತು. ಆದರೆ, ದೇಶದಲ್ಲಿ ಕೊರೊನಾ ಅಬ್ಬರ ಜೋರಾಗಿರುವ ಕಾರಣ ಮುಂದೂಡಿಕೆಯಾಗಿದ್ದು, ಇದೇ ವಿಷಯಕ್ಕೆ ಸಂಬಂಧಿಸಿದಂತೆ ಟೀಂ ಇಂಡಿಯಾ ವೇಗದ ಬೌಲರ್ ಮಾತನಾಡಿದ್ದಾರೆ.
ಮಾರ್ಚ್ 29ರಿಂದ ಆರಂಭಗೊಳ್ಳಬೇಕಾದ ಟೂರ್ನಿ ಕೊರೊನಾ ವೈರಸ್ ಭೀತಿಯಿಂದಾಗಿ ಮುಂದೂಡಿಕೆಯಾಗಿದ್ದು, ಯಾವಾಗ ನಡೆಯುತ್ತದೆ ಎಂಬುದರ ಬಗ್ಗೆ ಇಲ್ಲಿಯವರೆಗೂ ಖಚಿತ ಮಾಹಿತಿ ಇಲ್ಲ. ಇದೀಗ ಮಾತನಾಡಿರುವ ಮೊಹಮ್ಮದ್ ಶಮಿ, ಈ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್ ನಡೆಯುವುದು ಬಹುತೇಕ ಅನುಮಾನವಾಗಿದ್ದು, ಟಿ-20 ವಿಶ್ವಕಪ್ ಕೂಡ ಮುಂದೂಡಿಕೆಯಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ನಡೆಸಲು ಸಮಯವಕಾಶವಿಲ್ಲ. ಹೀಗಾಗಿ ಟೂರ್ನಿ ನಡೆಯುವುದು ಅನುಮಾನವಾಗಿದೆ ಎಂದಿದ್ದಾರೆ. ಐಪಿಎಲ್ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಭಾಗವಾಗಿರುವ ಶಮಿ, ಒಂದು ವೇಳೆ ಎಲ್ಲವೂ ನಿಯಂತ್ರಣಕ್ಕೆ ಬಂದು ದೇಶದಲ್ಲಿ ಹೆರಿಕೆ ಮಾಡಿರುವ ಲಾಕ್ಡೌನ್ ಬೇಗ ಮುಕ್ತಾಯಗೊಂಡರೆ ಮಾತ್ರ ಐಪಿಎಲ್ ನಡೆಯಬಹುದು ಎಂದಿದ್ದಾರೆ.
ಟಿ-20 ವಿಶ್ವಕಪ್ ಆರಂಭಗೊಳ್ಳುವುದಕ್ಕೂ ಮುಂಚಿತವಾಗಿ ಐಪಿಎಲ್ ಆರಂಭಗೊಂಡರೆ ಅದು ಗ್ರೇಟ್ ಎಂದಿರುವ ಶಮಿ, ವಿಶ್ವಕಪ್ಗೆ ತಯಾರಿಯಾಗಲು ಇದೊಂದು ಉತ್ತಮ ವೇದಿಕೆಯಾಗಲಿದೆ ಎಂದಿದ್ದಾರೆ.