ಚೆನ್ನೈ: ನೆಟ್ ಬೌಲರ್ ಆಗಿ ಆಸ್ಟ್ರೇಲಿಯಾಕ್ಕೆ ತೆರಳಿದ್ದ ವೇಗಿ ತಂಗರಸು ನಟರಾಜನ್ ಮೂರು ಮಾದರಿಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿ ಇತಿಹಾಸ ನಿರ್ಮಿಸಿದ್ದರು. ಆದರೆ ಸ್ವತಃ ನಟರಾಜನ್ ತಾವು ಭಾರತದ ಪರ ಆಡುತ್ತೇನೆಂದು ನಿರೀಕ್ಷಿಸಿರಲಿಲ್ಲ ಎಂದು ಹೇಳಿದ್ದಾರೆ.
29 ವರ್ಷದ ನಟರಾಜನ್ ಒಂದೇ ಪ್ರವಾಸದಲ್ಲಿ ಮೂರು ಮಾದರಿಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಮೊದಲ ಹಾಗೂ ಏಕೈಕ ಆಟಗಾರ ಎನಿಸಿಕೊಂಡಿದ್ದಾರೆ. ಡಿಸೆಂಬರ್ 2ರಂದು ಅವರು ಕ್ಯಾನ್ಬೆರಾದಲ್ಲಿ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ನಂತರ ಟಿ-20 ಹಾಗೂ ಅನುಭವಿ ವೇಗಿಗಳ ಅನುಪಸ್ಥಿತಿಯಲ್ಲಿ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು.
ನಾನು ನನ್ನ ಕೆಲಸ ಮಾಡಲು ಉತ್ಸುಕನಾಗಿದ್ದೆ. ಆದರೆ ಏಕದಿನ ಕ್ರಿಕೆಟ್ನಲ್ಲಿ ಅವಕಾಶ ಸಿಗುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ನಾನು ಏಕದಿನ ಪಂದ್ಯದಲ್ಲಿ ಆಡುತ್ತಿದ್ದೇನೆ ಎಂದು ತಂಡದ ಆಡಳಿತ ಮಂಡಳಿ ಹೇಳಿದಾಗ ಸ್ವಲ್ಪ ಒತ್ತಡವಿತ್ತು. ನಾನು ಈ ಅವಕಾಶವನ್ನು ಉಪಯೋಗಿಸಿಕೊಳ್ಳಲು ಬಯಸಿದೆ. ಮೊದಲ ಬಾರಿ ಆಡುವುದು ಮತ್ತು ವಿಕೆಟ್ ಪಡೆದದ್ದು ಒಂದು ಕನಸಿನಂತಿತ್ತು ಎಂದು ನಟರಾಜನ್ ಸೇಲಂ ಜಿಲ್ಲೆಯ ತಮ್ಮ ಊರಾದ ಚಿನ್ನಪ್ಪಂಪಟ್ಟಿಯಲ್ಲಿ ವರದಿಗಾರರಿಗೆ ತಿಳಿಸಿದ್ದಾರೆ.
ನಾನು ಭಾರತ ತಂಡಕ್ಕೆ ಆಡಬೇಕೆಂಬ ಕನಸು ನನಸಾಗಿದ್ದನ್ನು ಮತ್ತು ಆ ಸಂತೋಷವನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಾಗುತ್ತಿಲ್ಲ. ಇದು ಕನಸಿನಂತೆ ಇತ್ತು. ನನಗೆ ಕೋಚ್ಗಳು, ಆಟಗಾರರಿಂದ ಸಾಕಷ್ಟು ಬೆಂಬಲ ಸಿಕ್ಕಿತು. ಎಲ್ಲರೂ ನನ್ನನ್ನು ಬೆಂಬಲಿಸಿದರು ಮತ್ತು ಪ್ರೇರೇಪಿಸಿದರು. ಅವರು ನನ್ನ ಬೆನ್ನಿಗೆ ನಿಂತಿದ್ದರಿಂದಲೇ ನಾನು ಉತ್ತಮ ಪ್ರದರ್ಶನ ತೋರಲು ಸಾಧ್ಯವಾಯಿತು ಎಂದಿದ್ದಾರೆ.
ಇದನ್ನು ಓದಿ:ಭಾರತದ ವಿರುದ್ಧ ಇಂಗ್ಲೆಂಡ್ ಬಲಿಷ್ಠ ತಂಡವನ್ನು ಕಣಕ್ಕಿಳಿಸಬೇಕಿದೆ: ಪೀಟರ್ಸನ್