ನವದೆಹಲಿ: ಭಾರತ ತಂಡದ ಮಾಜಿ ಆಟಗಾರ ಹಾಗೂ ಹಾಲಿ ಎಂಪಿ ಗೌತಮ್ ಗಂಭೀರ್ ಹೆಸರನ್ನು ಅರುಣ್ ಜೇಟ್ಲಿ ಕ್ರೀಡಾಂಗಣದ ಸ್ಟ್ಯಾಂಡ್‌ವೊಂದಕ್ಕೆ ನಾಮಕರಣ ಮಾಡುವ ಮೂಲಕ ಹಿರಿಯ ಕ್ರಿಕೆಟಿಗನಿಗೆ ಡೆಲ್ಲಿ ಹಾಗೂ ಜಿಲ್ಲಾ ಕ್ರಿಕೆಟ್ ಸಂಸ್ಥೆ ಗೌರವಿಸಿದೆ.
ಭಾರತ ಪರ 58 ಟೆಸ್ಟ್ ಹಾಗೂ 147 ಏಕದಿನ ಪಂದ್ಯಗಳನ್ನಾಡಿರುವ ಗೌತಮ್ ಗಂಭೀರ್ ಕ್ರಮವಾಗಿ 4157 ಹಾಗೂ 5238 ರನ್ ಬಾರಿಸಿದ್ದಾರೆ. ಇನ್ನು 37 ಟಿ-20 ಪಂದ್ಯಗಳನ್ನಾಡಿದ್ದು, 932 ರನ್ ಬಾರಿಸಿದ್ದಾರೆ. ಇದಲ್ಲದೆ 2007ರ ಟಿ-20 ವಿಶ್ವಕಪ್ ಹಾಗೂ 2011ರ ಏಕದಿನ ವಿಶ್ವಕಪ್ ಗೆಲುವಿನಲ್ಲಿ ಭಾರತ ತಂಡದ ಪರ ಮಹತ್ವದ ಪಾತ್ರ ವಹಿಸಿದ್ದರು.
ಗಂಭೀರ್ ದೇಶಕ್ಕೆ ಎರಡು ವಿಶ್ವಕಪ್ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಅವರಿಗೆ ಗೌರವ ಸೂಚಿಸಲು ಜೂನ್‌ನಲ್ಲಿ ಗಂಭೀರ್ ಸ್ಟ್ಯಾಂಡ್ ಬಗ್ಗೆ ಪ್ರಸ್ತಾಪ ಮಾಡಲಾಗಿತ್ತು. ಆದರೆ ಡಿಡಿಸಿಎ ಸದಸ್ಯರ ಮಧ್ಯೆ ಭಿನ್ನಾಭಿಪ್ರಾಯದ ಕಾರಣದಿಂದ ತಡವಾಗಿತ್ತು. ಇದೀಗ ಇಂದು ಡಿಡಿಸಿಎ ವಿಶ್ವಕಪ್ ಹೀರೋ ಹೆಸರಿನಲ್ಲಿ ಸ್ಟ್ಯಾಂಡ್ ಉದ್ಘಾಟನೆ ಮಾಡುವ ಮೂಲಕ ಗೌತಿ ಅಭಿಮಾನಿಗಳಿಗೆ ಖುಷಿ ನೀಡಿದೆ.
ಈಗಾಗಲೇ ಅರುಣ್ ಜೇಟ್ಲಿ ಮೈದಾನದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೆಸರನ್ನು ಕೆಲವು ತಿಂಗಳ ಹಿಂದೆಯಷ್ಟೆ ನಾಮಕರಣ ಮಾಡಲಾಗಿತ್ತು. ಇನ್ನು ಮಾಜಿ ಕ್ರಿಕೆಟಿಗರಾದ ಬಿಷನ್ ಸಿಂಗ್ ಬೇಡಿ, ಮೊಹಿಂದರ್ ಅಮರ್ ನಾಥ್ ಹೆಸರಿನ ಸ್ಟ್ಯಾಂಡ್ ಈ ಹಿಂದೆಯೇ ನಿರ್ಮಾಣವಾಗಿದೆ. ಇದೀಗ ಈ ಪಟ್ಟಿಗೆ ಗೌತಮ್ ಗಂಭೀರ್ ಹೆಸರು ಕೂಡ ಸೇರ್ಪಡೆಯಾಗಿದೆ.