ಹೈದರಾಬಾದ್: ಆ್ಯಶಸ್ ಕ್ರಿಕೆಟ್ ಸರಣಿಯಲ್ಲಿ ರನ್ ಹೊಳೆ ಹರಿಸುತ್ತಿರುವ ಆಸೀಸ್ ಮಾಜಿ ನಾಯಕ ಸ್ಟೀವ್ ಸ್ಮಿತ್ ಅವರನ್ನು ಭಾರತದ ಜಸ್ಪ್ರೀತ್ ಬುಮ್ರಾ ನೂರಕ್ಕೆ 100ಷ್ಟು ಪೆವಿಲಿಯನ್ಗೆ ಅಟ್ಟುವಲ್ಲಿ ಯಶಸ್ವಿಯಾಗಲಿದ್ದಾರೆ ಎಂದು ಇಂಗ್ಲೆಂಡ್ ಮಾಜಿ ಬೌಲರ್ ಡಾರೆನ್ ಗೌಪ್ ಪ್ರತಿಕ್ರಿಯಿಸಿದ್ದಾರೆ.
ಬಾಲ್ ಟ್ಯಾಂಪರಿಂಗ್ ಕೇಸ್ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಮರಳಿರುವ ಸ್ಮಿತ್ ಇಂಗ್ಲೆಂಡ್ ಬೌಲರ್ಗಳನ್ನು ಲೀಲಾಜಾಲವಾಗಿ ದಂಡಿಸುವ ಮೂಲಕ ಆ್ಯಶಸ್ ಸರಣಿಯ 4 ಇನ್ನಿಂಗ್ಸ್ಗಳಲ್ಲಿ 589 ರನ್ ಪೇರಿಸಿದ್ದಾರೆ. ಸರಣಿಯ ಮೊದಲ ಪಂದ್ಯದ ಎರಡೂ ಇನ್ನಿಂಗ್ಸ್ಗಳಲ್ಲಿ ಶತಕ ಗಳಿಸಿದ್ದ ಸ್ಮಿತ್ 2ನೇ ಟೆಸ್ಟ್ ಪಂದ್ಯದ ವೇಳೆ ಆಂಗ್ಲರ ಜೋಪ್ರಾ ಆರ್ಚರ್ ಬೌಲಿಂಗ್ನಲ್ಲಿ ಗಾಯಗೊಂಡು ಪಂದ್ಯದಿಂದ ಹೊರಗುಳಿದಿದ್ದರು. ಆದರೆ, ಮೂರನೇ ಪಂದ್ಯದಲ್ಲಿ ದ್ವಿಶತಕ (211) ಬಾರಿಸಿ ಮಿಂಚಿದ್ದಾರೆ.
ಇನ್ನು ಸ್ಟೀವ್ ಬ್ಯಾಟಿಂಗ್ ಪರಾಕ್ರಮದಿಂದ ಆಂಗ್ಲ ಬೌಲರ್ಗಳು ಬೆವರಿಳಿದಿದ್ದಾರೆ. ವಿಕೆಟ್ ಕೀಳುವಲ್ಲಿ ತಿಣುಕಾಡುತ್ತಿರುವ ಬೆನ್ನಲ್ಲೇ, ನಿಮ್ಮ ಪ್ರಕಾರ ಸ್ಮಿತ್ ವಿಕೆಟ್ ಪಡೆಯುವ ಬೌಲರ್ ಯಾರು ಎಂದು ಇಎಸ್ಪಿಎನ್ ಕ್ರಿಕ್ಇನ್ಫೋ ಪೋಸ್ಟ್ವೊಂದನ್ನು ಇನ್ಸ್ಟಾಗ್ರಾಂನಲ್ಲಿ ಹಾಕಿತ್ತು. ಈ ಪೋಸ್ಟ್ಗೆ ಪ್ರತಿಕ್ರಿಯಿಸಿರುವ ಗೌಪ್ ಅವರು 'ಬುಮ್ರಾ ಶೇ 100ರಷ್ಟು ಎಂದು ಬರೆದಿದ್ದಾರೆ.
ಇತ್ತೀಚೆಗೆ ವೆಸ್ಟ್ ಇಂಡೀಸ್ ಪ್ರವಾಸದಲ್ಲೂ ಕೂಡ ತಮ್ಮ ವೇಗ ಹಾಗೂ ಕರಾರುವಾಕ್ ಯಾರ್ಕರ್ಗಳ ಮೂಲಕ ಕೆರಿಬಿಯನ್ನರನ್ನು ಕಾಡಿದ್ದ ಜಸ್ಪ್ರೀತ್ ಬುಮ್ರಾ ಟೆಸ್ಟ್ ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲದೇ ಟೆಸ್ಟ್ ಕ್ರಿಕೆಟ್ ಶ್ರೇಯಾಂಕದಲ್ಲಿ 3ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ.