ಇಸ್ಲಾಮಾಬಾದ್: ಕ್ರಿಕೆಟ್ನಿಂದ ಬ್ಯಾನ್ ಆಗಿರುವ ಪಾಕಿಸ್ತಾನ್ ಕ್ರಿಕೆಟಿಗ ದಾನಿಶ್ ಕನೇರಿಯಾ ಅವರು, ನನ್ನ ಪರಿಸ್ಥಿತಿ ಉತ್ತಮವಾಗಿಲ್ಲ ದಯವಿಟ್ಟು ಸಹಾಯ ಮಾಡಿ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಮೊರೆ ಇಟ್ಟಿದ್ದಾರೆ.
ಕೌಂಟಿ ಸೈಡ್ ಪಂದ್ಯದ ವೇಳೆ ಸ್ಪಾಟ್ ಫಿಕ್ಸಿಂಗ್‌ನಲ್ಲಿ ತಪ್ಪಿತಸ್ಥರೆಂದು ಕಂಡುಬಂದ ಹಿನ್ನೆಲೆಯಲ್ಲಿ ಕನೇರಿಯಾ ಅವರನ್ನ ನಿಷೇಧಿಸಲಾಗಿತ್ತು. ನಂತರದಲ್ಲಿ, ನನ್ನ ಸಮಸ್ಯೆಯನ್ನ ಪರಿಹರಿಸಿ ಎಂದು ಪಾಕಿಸ್ತಾನ್ ಮತ್ತು ವಿಶ್ವದಾದ್ಯಂತ ಅನೇಕ ವ್ಯಕ್ತಿಗಳನ್ನು ಸಂಪರ್ಕಿಸಿದ್ದೇನೆ. ಯಾರು ನನ್ನ ಸಹಾಯಕ್ಕೆ ನಿಲ್ಲಲಿಲ್ಲ. ಆದ್ರೆ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಇತರೆ ಪಾಕ್ ಕ್ರಿಕೆಟಿಗರ ಸಮಸ್ಯೆಗಳನ್ನು ಪರಿಹರಿಸಲಾಗಿದೆ. ಒಬ್ಬ ಕ್ರಿಕೆಟ್ ಆಟಗಾರನಾಗಿ ಪಾಕ್ ತಂಡಕ್ಕೆ ಉತ್ತಮ ಕೊಡುಗೆ ನಿಡಿದ್ದೇನೆ. ಆ ಬಗ್ಗೆ ನನಗೆ ಹೆಮ್ಮೆ ಇದೆ. ಪಾಕಿಸ್ತಾನ ಮಂದಿ ನನ್ನ ಸಹಾಯಕ್ಕೆ ನಿಲ್ಲುತ್ತಾರೆ ಎಂದು ನಂಬಿದ್ದೇನೆ ಎಂದು ಕನೇರಿಯಾ ಅಭಿಪ್ರಾಯಪಟ್ಟಿದ್ದಾರೆ.
ಪಾಕ್ ಪ್ರಧಾನಿ ಇಮ್ರಾನ್ ಖಾನ್ ಸೇರಿದಂತೆ ಇತರೆ ಆಟಗಾರರ ಸಹಾಯದ ನಿರೀಕ್ಷೆಯಲ್ಲಿದ್ದೇನೆ. ಈ ಸಮಸ್ಯೆಯಿಂದ ಹೊರಬರಲು ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಮತ್ತು ಇತರೆ ದೇಶದ ಬೆಂಬಲ ಬೇಕಿದೆ. ದಯವಿಟ್ಟು ನನಗೆ ಸಹಾಯ ಮಾಡಿ ಎಂದು ಕನೇರಿಯಾ ಮನವಿ ಮಾಡಿದ್ದಾರೆ.
ಹಿಂದೂ ಎಂಬ ಕಾರಣಕ್ಕೆ ಪಾಕ್ ಸಹ ಪ್ಲೇಯರ್ಸ್ ಅನುಚಿತ ವರ್ತನೆ: ಶೊಯೇಬ್ ಹೇಳಿಕೆ ನಿಜ ಎಂದ ಕನೇರಿಯಾ!
ಅನಿಲ್ ದಳಪತ್ (Anil Dalpat) ನಂತರ ಪಾಕಿಸ್ತಾನ ಕ್ರಿಕೆಟ್ ತಂಡ ಪ್ರತಿನಿಧಿಸಿದ್ದ ಎರಡನೇ ಹಿಂದೂ ಆಟಗಾರ ಎಂಬ ಹೆಗ್ಗಳಿಕೆ ಕನೇರಿಯಾ ಅವರದ್ದಾಗಿದೆ. ಅವರೊಬ್ಬ ಹಿಂದೂ ಎಂಬ ಕಾರಣಕ್ಕೆ ಅವರನ್ನ ತಂಡದಿಂದ ದೂರ ಇಡಲಾಗಿತ್ತು. ಅವರ ಜೊತೆಗೆ ಒಟ್ಟಿಗೆ ಕುಳಿತು ಯಾವುದೇ ಪ್ಲೇಯರ್ಸ್ ಊಟ ಮಾಡುತ್ತಿರಲಿಲ್ಲ ಎಂದು ಪಾಕ್ ತಂಡದ ಮಾಜಿ ಆಟಗಾರ ಶೋಯೆಬ್ ಅಖ್ತರ್ ಹೇಳಿದ್ದರು.
ಅಖ್ತರ್ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಕನೇರಿಯಾ, ಅವರು ಹೇಳಿರುವುದು ಸತ್ಯ. ನಾನು ಹಿಂದೂ ಎಂಬ ಕಾರಣಕ್ಕಾಗಿ ಎಲ್ಲರೂ ನನ್ನೊಂದಿಗೆ ಮಾತನಾಡಲು ಹಿಂಜರಿಯುತ್ತಿದ್ದರು. ಅವರ ಹೆಸರು ಕೆಲವೇ ದಿನಗಳಲ್ಲಿ ಬಹಿರಂಗ ಪಡಿಸಲಿದ್ದೇನೆ ಎಂದಿದ್ದರು.