ಢಾಕಾ: ಬಾಂಗ್ಲಾದೇಶ ಕ್ರಿಕೆಟ್ ತಂಡಕ್ಕೆ ಸ್ಪಿನ್ ಬೌಲಿಂಗ್ ಕೋಚ್ ಆಗಿರುವ ಕಿವೀಸ್ನ ಲೆಜೆಂಡ್ ಸ್ಪಿನ್ನರ್ ಡೇನಿಯಲ್ ವೆಟೋರಿ ಬಿಸಿಬಿಯಿಂದ ಪ್ರತಿದಿನ 2.5 ಲಕ್ಷ ವೇತನ ಪಡೆಯಲಿದ್ದು, ಇವರು ಏಷ್ಯಾದ ದುಬಾರಿ ಬೌಲಿಂಗ್ ಕೋಚ್ ಎನಿಸಿಕೊಂಡಿದ್ದಾರೆ.
2020ರ ಟಿ20 ವಿಶ್ವಕಪ್ವರೆಗೆ ಬಾಂಗ್ಲಾದೇಶ ಕ್ರಿಕೆಟ್ ತಂಡಕ್ಕೆ ಸ್ಪಿನ್ ಬೌಲಿಂಗ್ ಕೋಚ್ ಆಗಿ ಕಳೆದ ತಿಂಗಳು ವೆಟೋರಿಯವರನ್ನು ಬಿಸಿಬಿ ಆಯ್ಕೆ ಮಾಡಿಕೊಂಡಿತ್ತು. ಅವರಿಗೆ ದಿನದ ಲೆಕ್ಕಾಚಾರದಲ್ಲಿ 3571 ಅಮೆರಿಕನ್ ಡಾಲರ್ ವೇತನ ನಿಗದಿಮಾಡಲಾಗಿದೆ. ಅಂದರೆ ಭಾರತೀಯ ಲೆಕ್ಕಾಚಾರದಲ್ಲಿ ದಿನಕ್ಕೆ 2.5 ಲಕ್ಷ ರೂ. ಪಡೆದುಕೊಳ್ಳಲಿದ್ದಾರೆ. ಆದರೆ ವೆಟೋರಿ ಶೇ. 30 ರಷ್ಟನ್ನು ತೆರಿಗೆ ರೂಪದಲ್ಲಿ ಕಟ್ಟಲಿದ್ದಾರೆ ಎಂದು ಬಾಂಗ್ಲಾದೇಶದ ಕ್ರಿಕೆಟ್ ವೆಬ್ಸೈಟ್ cricfrenzy ವರದಿ ಮಾಡಿದೆ.
ಭಾರತದ ಮಾಜಿ ಕ್ರಿಕೆಟಿಗ ಸುನೀಲ್ ಜೋಶಿ ಕೋಚಿಂಗ್ ಅವಧಿ ಮುಗಿದ ಮೇಲೆ ವೆಟೋರಿಯನ್ನು ಅರೆಕಾಲಿಕ ಕೋಚ್ ಆಗಿ ಆಯ್ಕೆ ಮಾಡಿಕೊಂಡಿದೆ. ಇದೀಗ ₹ 2.5 ಲಕ್ಷವೇತನ ಪಡೆಯುವ ಮೂಲಕ ಏಷ್ಯಾದಲ್ಲೇ ದುಬಾರಿ ಕೋಚ್ ಎನಿಸಿಕೊಂಡಿದ್ದಾರೆ.
ಐಪಿಎಲ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಕೋಚ್ ಆಗಿದ್ದ ವೆಟೋರಿ ಇದೇ ಮೊದಲ ಬಾರಿಗೆ ರಾಷ್ಟ್ರೀಯ ತಂಡದ ಕೋಚ್ ಆಗಿ ಆಯ್ಕೆಯಾಗಿದ್ದಾರೆ. ಮುಂಬರುವ ಭಾರತ ಪ್ರವಾಸದ ವೇಳೆ ಅವರ ಮೊದಲ ಟಾಸ್ಕ್ ಶುರುವಾಗಲಿದೆ.