ಚೆನ್ನೈ: 2008ರ ಆವೃತ್ತಿಗಾಗಿ ತಂಡದ ಐಕಾನ್ ಪ್ಲೇಯರ್ ಆಗಿ ಧೋನಿ ಬದಲಿಗೆ ಸೆಹ್ವಾಗ್ರನ್ನು ಖರೀದಿಸಲು ಚೆನ್ನೈ ಸೂಪರ್ ಕಿಂಗ್ಸ್ ಬಯಸಿತ್ತು. ಆದರೆ, ಡೆಲ್ಲಿ ಡ್ಯಾಶರ್ ತಮ್ಮ ತವರು ತಂಡ ಡೆಲ್ಲಿ ಡೇರ್ ಡೇವಿಲ್ಸ್ ತಂಡದ ಪರ ಆಡುವುದಾಗಿ ತಿಳಿಸಿದ ನಂತರ ಸಿಎಸ್ಕೆ ಧೋನಿ ಕಡೆ ಮುಖ ಮಾಡಿತು ಎಂದು ಸಿಎಸ್ಕೆ ತಂಡದ ಮಾಜಿ ಕ್ರಿಕೆಟಿಗ ಸುಬ್ರಮಣಿಯಂ ಬದ್ರಿನಾಥ್ ಬಹಿರಂಗ ಪಡಿಸಿದ್ದಾರೆ.
ಸಿಎಸ್ಕೆ ಮ್ಯಾನೇಜ್ಮೆಂಟ್ 2008ರ ಆವೃತ್ತಿಗೂ ಮುನ್ನ ಸೆಹ್ವಾಗ್ರನ್ನು ಆಯ್ಕೆ ಮಾಡಿಕೊಳ್ಳಲು ನಿರ್ಧರಿಸಿತ್ತು. ಆದರೆ, ಸೆಹ್ವಾಗ್ ಸ್ವತಃ "ತಾವು ಡೆಲ್ಲಿಯಲ್ಲಿ ಬೆಳೆದಿದ್ದೇನೆ, ಜೊತೆಗೆ ಡೆಲ್ಲಿ ಡೇರ್ ಡೇವಿಲ್ಸ್ನೊಂದಿಗೆ ಉತ್ತಮ ಸಂಪರ್ಕವಿದೆ" ಎಂದು ಹೇಳಿ ತಮ್ಮ ತವರು ತಂಡದ ಪರ ಆಡುವುದಾಗಿ ತಿಳಿಸಿದ್ದರು ಎಂದು ಬದ್ರಿನಾಥ್ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಹೇಳಿಕೊಂಡಿದ್ದಾರೆ.
ಸೆಹ್ವಾಗ್ ನಿರ್ಧಾರದ ನಂತರ, ಕೇವಲ 4 ವರ್ಷಕ್ಕಿಂತ ಕಡಿಮೆ ಅಂತಾರಾಷ್ಟ್ರೀಯ ಕ್ರಿಕೆಟ್ನ ಅನುಭವವುಳ್ಳವರಾಗಿದ್ದ ಎಂಎಸ್ ಧೋನಿಯನ್ನು ಸಿಎಸ್ಕೆ ಖರೀದಿಸಲು ನಿರ್ಧಾರ ಮಾಡಿತ್ತು. ಅಷ್ಟರಲ್ಲಾಗಲೇ ಅವರು ಭಾರತಕ್ಕೆ ಚೊಚ್ಚಲ ಟಿ20 ವಿಶ್ವಕಪ್ ತಂದುಕೊಟ್ಟಿದ್ದರು.
"ಸೆಹ್ವಾಗ್ ಡೆಲ್ಲಿಪರ ಆಡುತ್ತೇನೆಂಬ ನಿರ್ಧಾರಕ್ಕೆ ಒಪ್ಪಿಕೊಂಡ ಆಡಳಿತ ಮಂಡಳಿ ಅವರಿಗಿಂತ ಉತ್ತಮ ಆಟಗಾರನ ಕಡೆ ಗಮನ ಹರಿಸಿತು. ಇದಕ್ಕೂ ಮುನ್ನ ಭಾರತ 2007ರ ಟಿ20 ವಿಶ್ವಕಪ್ ಎತ್ತಿ ಹಿಡಿದಿತ್ತು. ಆ ನಂತರ ಧೋನಿ ಖರೀದಿಸಲು ಸಿಎಲ್ಕೆ ನಿರ್ಧಾರ ಮಾಡಿತು" ಎಂದು ಬದ್ರಿನಾಥ್ ತಿಳಿಸಿದ್ದಾರೆ.
ಧೋನಿ ಖರೀಧಿಸುವ ಮೂಲಕ ಸಿಎಸ್ಕೆ ಒಂದೇ ಕಲ್ಲಿನಲ್ಲಿ ಮೂರು ಹಕ್ಕಿ ಹೊಡೆಯಿತು ಎಂದು ಇದೇ ಸಂದರ್ಭದಲ್ಲಿ ಹೇಳಿದ್ದಾರೆ. ಮೊದಲನೇಯದಾಗಿ ಅವರು ವಿಶ್ವದ ಅತ್ಯುತ್ತಮ ನಾಯಕ, ಅವರು ಗೆಲ್ಲದ ಯಾವುದೇ ಟ್ರೋಫಿಗಳಿಲ್ಲ. ಎರಡನೇಯದಾಗಿ ಅವರು ಅತ್ಯುತ್ತಮ ಫಿನಿಶರ್ ಹಾಗೂ ಮೂರನೆಯದು ಅವರು ಚಾಣಾಕ್ಷ ವಿಕೆಟ್ ಕೀಪರ್. ನಾನು ನೋಡಿರುವ ಅತ್ಯುತ್ತಮ ಸುರಕ್ಷಿತ ವಿಕೆಟ್ ಕೀಪರ್ ಕೂಡ" ಎಂದು ಅವರು ಸಿಎಸ್ಕೆ ಒಂದೇ ಕಲ್ಲಿನಲ್ಲಿ ಹೇಗೆ 3ಹಕ್ಕಿ ಹೊಡೆದುರುಳಿಸಿತು ಎಂದು ವಿವರಿಸಿದ್ದಾರೆ.
ಧೋನಿಯೂ ಕೂಡ ಸಿಎಸ್ಕೆ ಭರವೆಸೆಯನ್ನು ನಿರಾಶೆ ಮಾಡಲಿಲ್ಲ. ಅವರು ಸಿಎಸ್ಕೆ ತಂಡವನ್ನು ಎಲ್ಲಾ 10 ಆವೃತ್ತಿಗಳಲ್ಲೂ ಪ್ಲೇಆಫ್ಗೆ ಕರೆತಂದಿದ್ದಾರೆ. 8 ಬಾರಿ ಫೈನಲ್ ಪ್ರವೇಶಿಸಿದ್ದರೆ 3 ಬಾರಿ ಚಾಂಪಿಯನ್ ಆಗಿದೆ.