ಮುಂಬೈ: ಟೀಮ್ ಇಂಡಿಯಾ ಆಲ್ರೌಂಡರ್ ಸುರೇಶ್ ರೈನಾ ಕೋವಿಡ್ 19 ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಮುಂಬೈ ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರದಲ್ಲಿ ರಾತ್ರಿ ವೇಳೆ ಕರ್ಫ್ಯೂ ಇದ್ದರೂ ಕೋವಿಡ್ ನಿಯಮವನ್ನು ಗಾಳಿಗೆ ತೂರಿ ಮುಂಬೈ ಡ್ರಾಗನ್ ಫ್ಲೈ ಕ್ಲಬ್ನ ಪಾರ್ಟಿಯಲ್ಲಿ ಪಾಲ್ಗೊಂಡಿದ್ದಕ್ಕೆ ರೈನಾ ಸೇರಿ 34 ಮಂದಿಯನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.
ಆದರೆ, ಸುರೇಶ್ ರೈನಾ, ನಟ ಹೃತಿಕ್ ರೋಷನ್ ಪತ್ನಿ ಸುಸೇನ್ ಖಾನ್ ಮತ್ತು ಗಾಯಕ ಗುರು ರಾಂಧವ ಜಾಮೀನಿನ ಮೇಲೆ ಹೊರಬಂದಿದ್ದಾರೆ ಎಂದು ತಿಳಿದು ಬಂದಿದೆ. ಪೊಲೀಸರು ಬಂಧಿಸಿರುವ 34 ಮಂದಿಯಲ್ಲಿ ಕ್ಲಬ್ನ ಏಳು ಸಿಬ್ಬಂದಿಗಳೂ ಇದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನು ಓದಿ: ಕೊರೊನಾ 2.0 ಭೀತಿ; 15 ದಿನ ರಾತ್ರಿ ಕರ್ಫ್ಯೂ ಹೇರಿದ ಮಹಾರಾಷ್ಟ್ರ ಸರ್ಕಾರ!
ಬಂಧಿತರ ಮೇಲೆ ಭಾರತೀಯ ದಂಡ ಸಂಹಿತೆ ಸೆಕ್ಷನ್ 188, 269, 34ರ ಅಡಿ, ಬಾಂಬೆ ಪೊಲೀಸ್ ಕಾಯ್ದೆ ಮತ್ತು ಸಾಂಕ್ರಾಮಿಕ ರೋಗ ಕಾಯ್ದೆಗಳ ಅಡಿ ಪ್ರಕರಣಗಳನ್ನು ದಾಖಲಿಸಲಾಗಿದೆ. ಅಲ್ಲದೇ ಡ್ರಾಗನ್ ಫ್ಲೈಕ್ಲಬ್‌ನಲ್ಲಿ ಕೋವಿಡ್ ನಿಯಮಗಳನ್ನು ಪಾಲಿಸುತ್ತಿರಲಿಲ್ಲ ಮತ್ತು ಕ್ಲಬ್ ನಡೆಸಲು ನೀಡಲಾಗಿದ್ದ ಸಮಯದ ಗಡುವನ್ನು ಮೀರಿ ತೆರೆಯಲಾಗಿತ್ತು ಎಂದು ಸಹಾರ್ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.
ಬ್ರಿಟನ್‌ನಲ್ಲಿ ಹರಡಿರುವ ಹೊಸ ಕೊರೊನಾ ವೈರಸ್ ರೂಪಾಂತರಗೊಳ್ಳುತ್ತಿರುವುದರಿಂದ ಮಹಾರಾಷ್ಟ್ರ ಸರ್ಕಾರ ಪುರಸಭೆ ವ್ಯಾಪ್ತಿಯಲ್ಲಿ ಕರ್ಫ್ಯೂ ಘೋಷಿಸಿದೆ. ಅಲ್ಲದೇ ಮುನ್ನೆಚ್ಚರಿಕೆಯಾಗಿ ವಿಮಾನ ಹಾರಾಟಕ್ಕೆ ನಿರ್ಬಂಧ ಹೇರಿದೆ.
ಇದನ್ನು ಓದಿ: ಭಾರತಕ್ಕೆ ಕೊಹ್ಲಿ ಅನುಪಸ್ಥಿತಿ ಕಾಡಲಿದೆ, ಆದರೆ ಪಿತೃತ್ವ ರಜೆಗೆ ಅವರು ಖಂಡಿತ ಅರ್ಹ: ಸ್ಟಿವ್ ಸ್ಮಿತ್